ಮುಂದಿನ ವಾರ ಕ್ಸಿಜಿಂಪಿಂಗ್-ಪುಟಿನ್ ಭೇಟಿ

Update: 2022-09-07 15:28 GMT

ಬೀಜಿಂಗ್, ಸೆ.6: ಮುಂದಿನ ವಾರ ಉಜ್ಬೇಕಿಸ್ತಾನದಲ್ಲಿ  ನಡೆಯಲಿರುವ ಪ್ರಾದೇಶಿಕ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯಾಗಲಿದ್ದಾರೆ ಎಂದು ರಶ್ಯದ ರಾಜತಾಂತ್ರಿಕ ಮೂಲಗಳು ಬುಧವಾರ ಹೇಳಿವೆ.

ಉಜ್ಬೇಕಿಸ್ತಾನದಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಯಲ್ಲಿ ನಮ್ಮ ಮುಖಂಡರು ಭೇಟಿಯಾಗಲಿದ್ದಾರೆ. ಈ ಸಂದರ್ಭ ಉಭಯ ಮುಖಂಡರ ಮಧ್ಯೆ ಪ್ರಮುಖ ವಿಷಯಗಳ ಬಗ್ಗೆ ಗಂಭೀರ ಮಾತುಕತೆಗೆ ಕಾರ್ಯಸೂಚಿ ಸಿದ್ಧಪಡಿಸಲಾಗುತ್ತಿದೆ. ದ್ವಿಪಕ್ಷೀಯ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡಲು ಬಹಳಷ್ಟು ವಿಷಯಗಳಿವೆ  ಎಂದು ಚೀನಾಕ್ಕೆ ರಶ್ಯದ ರಾಯಭಾರಿ ಆಂಡ್ರೆ ಡೆನಿಸೋವ್ ಹೇಳಿದ್ದಾರೆ.

ಚೀನಾ, ರಶ್ಯ, ಭಾರತ, ಪಾಕಿಸ್ತಾನ, ಕಝಕ್‌ಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ ಮತ್ತು ತಜಿಕಿಸ್ತಾನ ದೇಶಗಳು ಸದಸ್ಯರಾಗಿರುವ ಶಾಂಘೈ ಸಹಕಾರ ಸಂಘಟನೆಯ ಮುಂದಿನ ಶೃಂಗಸಭೆ ಉಜ್ಬೇಕಿಸ್ತಾನದ ಸಮರಕಾಂಡ್ ನಗರದಲ್ಲಿ ಸೆಪ್ಟಂಬರ್ 15 ಮತ್ತು 16ರಂದು ನಡೆಯಲಿದೆ. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ರಶ್ಯದ ಮೇಲೆ  ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ, ಏಶ್ಯದ ದೇಶಗಳೊಂದಿಗೆ ವ್ಯವಹಾರ ಸಂಬಂಧ  ವೃದ್ಧಿಗೆ ರಶ್ಯ ಮುಂದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News