ಪಾಕಿಸ್ತಾನ: ಪ್ರವಾಹದಿಂದ ಯುನೆಸ್ಕೋ ವಿಶ್ವಪಾರಂಪರಿಕ ತಾಣಕ್ಕೆ ಹಾನಿ

Update: 2022-09-07 15:33 GMT
photo :the print

ಇಸ್ಲಾಮಾಬಾದ್, ಸೆ.7: ಅಸಾಮಾನ್ಯ ಮುಂಗಾರು ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ 4,500 ವರ್ಷ ಪುರಾತನವಾದ ಅತ್ಯಮೂಲ್ಯ ಪುರಾತತ್ವಶಾಸ್ತ್ರ ಪ್ರದೇಶ, ವಿಶ್ವಪಾರಂಪರಿಕ ತಾಣಕ್ಕೆ ಹಾನಿಯಾಗಿದೆ  ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣದ ಸಿಂಧ್ ಪ್ರಾಂತದಲ್ಲಿ ಸಿಂಧೂ ನದಿಯ ಸಮೀಪ  ಮೊಹೆಂಜೊ ದಾರೊ(ಪ್ರಾಚೀನ ಸಿಂಧೂ ಕಣಿವೆ ನಾಗರಿಕತೆಯ ನಗರ)ದ ಅವಶೇಷಗಳು  ದಕ್ಷಿಣ ಏಶ್ಯಾದ ಅತ್ಯುತ್ತಮ ಸಂರಕ್ಷಿತ ನಗರ ವಸಾಹತುಗಳೆಂದು ಪರಿಗಣಿಸಲ್ಪಟ್ಟಿವೆ. 1922ರಲ್ಲಿ ಇವನ್ನು ಪತ್ತೆಹಚ್ಚಲಾಗಿದ್ದು ಇಂದಿಗೂ ಪ್ರಾಚೀನ ಈಜಿಪ್ಟ್ ಮತ್ತು ಮೆಸೊಪೊಟೇಮಿಯಾದೊಂದಿಗೆ ಹೊಂದಿಕೆಯಾಗುವ ಈ ನಾಗರಿಕತೆಯ ಕಣ್ಮರೆಯ ರಹಸ್ಯ ಹಾಗೆಯೇ ಉಳಿದಿದೆ. 

ಭಾರೀ ಮಳೆಯಿಂದಾಗಿ ಸಿಂಧೂ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹವು ಮೊಹೆಂಜೊದಾರೊ ತಾಣಕ್ಕೆ  ನೇರವಾಗಿ ಅಪ್ಪಳಿಸಿಲ್ಲ. ಆದರೆ  ದಾಖಲೆ ಮಟ್ಟದ ಮಳೆ ಪುರಾತನ ನಗರದ ಅವಶೇಷಗಳಿಗೆ ಹಾನಿ ಎಸಗಿದೆ. ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಿರುವುದೂ ಸೇರಿದಂತೆ ಹಲವು ಬೃಹತ್ ಗೋಡೆಗಳು ಕುಸಿದು ಬಿದ್ದಿವೆ ಎಂದು ಸ್ಥಳದ ಮೇಲ್ವಿಚಾರಕ ಅಹ್ಸಾನ್ ಅಬ್ಬಾಸಿ ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸ್ಥಳದ ಹೆಗ್ಗುರುತಾದ ಬೌದ್ಧ ಸ್ತೂಪ- ಪೂಜೆ, ಧ್ಯಾನ, ಸಮಾಧಿಗೆ ಸಂಬಂಧಿಸಿದ ಅರ್ಧಗೋಳದ ರಚನೆಗೆ ಹಾನಿಯಾಗಿಲ್ಲ. ಆದರೆ ಹೊರಗಿನ ಗೋಡೆ, ಕೊಠಡಿಗಳನ್ನು ಪ್ರತ್ಯೇಕಿಸುವ ಬೃಹತ್ ಗೋಡೆಗಳಿಗೆ ಮಳೆಯಿಂದ ಹಾನಿಯಾಗಿದೆ.   ಪುರಾತತ್ವ ಶಾಸ್ತ್ರಜ್ಞರ ಮೇಲುಸ್ತುವಾರಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಅಬ್ಬಾಸಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News