ವಿನಾಶಕಾರಿ ಪ್ರವಾಹಕ್ಕೆ ಹವಾಮಾನ ಬದಲಾವಣೆ ಕಾರಣ: ವಿಶ್ವಸಂಸ್ಥೆ ಎಚ್ಚರಿಕೆ

Update: 2022-09-07 15:39 GMT
photo : hindustan times 

ಇಸ್ಲಮಾಬಾದ್, ಸೆ.7: ಪಾಕಿಸ್ತಾನ ಸೇರಿದಂತೆ ಜಗತ್ತಿನೆಲ್ಲೆಡೆ ಸಂಭವಿಸುತ್ತಿರುವ ಪ್ರವಾಹಗಳು ಹವಾಮಾನ ಬದಲಾವಣೆಯ ಪರಿಣಾಮವಾಗಿದ್ದು ನಮ್ಮ ಗ್ರಹದ ವಿನಾಶವನ್ನು ತ್ವರಿತಗೊಳಿಸುತ್ತಿದೆ. ಇಂದು ಪಾಕಿಸ್ತಾನದಲ್ಲಿ ಸಂಭವಿಸಿದ ದುರಂತ ನಾಳೆ ಜಗತ್ತಿನ ಮತ್ತೊಂದೆಡೆ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಸುರಿಯುತ್ತಿರುವ ಅಸಾಮಾನ್ಯ ಮುಂಗಾರು ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹ ತಂದೊಡ್ಡಿರುವ ನಾಶ-ನಷ್ಟದ ಸಮೀಕ್ಷೆ ನಡೆಸಲು ಆ ದೇಶಕ್ಕೆ ತೆರಳುವ ಮುನ್ನ ಗುಟೆರಸ್ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಮತ್ತು ಅಲ್ಲಿನ ಜನತೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಆ ದೇಶಕ್ಕೆ   ಅಂತರಾಷ್ಟ್ರೀಯ ಸಮುದಾಯದ ಬೃಹತ್ ಬೆಂಬಲಕ್ಕಾಗಿ ಮನವಿ ಮಾಡಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದೇನೆ ಎಂದವರು ಹೇಳಿದ್ದಾರೆ.

1959ರಿಂದ ಪಾಕಿಸ್ತಾನವು ಸುಮಾರು 0.4%ದಷ್ಟು ಇಂಗಾಲದ ಡೈಆಕ್ಸೈಡನ್ನು ವಾತಾವರಣಕ್ಕೆ ಹೊರಸೂಸಿದೆ. ಇದೇ ಅವಧಿಯಲ್ಲಿ ಅಮೆರಿಕ  21.5%, ಚೀನಾ 16.4% ಇಂಗಾಲದ ಡೈಯಾಕ್ಸೈಡನ್ನು ಹೊರಸೂಸಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಮಳೆ ಮತ್ತು ಪ್ರವಾಹ ಸಂಬಂಧಿ ದುರಂತದಿಂದ ಮೃತಪಟ್ಟವರ ಸಂಖ್ಯೆ 1,343ಕ್ಕೆ ಏರಿದೆ ಮತ್ತು ಕೋಟ್ಯಾಂತರ ಜನತೆ ಮನೆಯನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ ಎಂದು ಪಾಕಿಸ್ತಾನದ ಸರಕಾರ ಮಾಹಿತಿ ನೀಡಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಮತ್ತು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಹಲವೆಡೆ ತಾತ್ಕಾಲಿಕ ಶಿಬಿರಗಳನ್ನು ಆರಂಭಿಸಲಾಗಿದ್ದು ಸಾವಿರಾರು ಮಂದಿ ಅಲ್ಲಿ ನೆಲೆಸಿದ್ದಾರೆ. ಅವರಿಗೆ ಆಹಾರ, ನೀರು ಒದಗಿಸಲು ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ಶಹಬಾಝ್ ಶರೀಫ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News