ಬಿಜೆಪಿ ರಥಯಾತ್ರೆ ಅಧಿಕಾರಕ್ಕಾಗಿ, ನಮ್ಮ ಯಾತ್ರೆ ಸತ್ಯಕ್ಕಾಗಿ: ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್

Update: 2022-09-07 16:19 GMT

ಕನ್ಯಾಕುಮಾರಿ, ಸೆ. 6:  ಬಿಜೆಪಿ 1990ರಲ್ಲಿ  ರಥ ಯಾತ್ರೆ ನಡೆಸಿರುವುದು ಅಧಿಕಾರಕ್ಕಾಗಿ. ಆದರೆ, ಕಾಂಗ್ರೆಸ್ ‘‘ಭಾರತ್ ಜೋಡೊ ಯಾತ್ರೆ’’ ನಡೆಸುತ್ತಿರುವುದು ಸತ್ಯಕ್ಕಾಗಿ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಬುಧವಾರ ಹೇಳಿದ್ದಾರೆ.

ಪಕ್ಷದಿಂದ ‘ಭಾರತ್ ಯಾತ್ರಿ’ ಎಂದು ಹೆಸರಿಸಲಾದ ಹಾಗೂ ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯ ಸಂಪೂರ್ಣ 3,570 ಕಿ.ಮೀ. ಅನ್ನು ನಡಿಗೆಯಲ್ಲಿ ಸಾಗಲಿದ್ದಾರೆ ಎಂದು ಹೇಳಲಾದ ಕನ್ನಯ್ಯ ಕುಮಾರ್ ಅವರು, ಕಾಂಗ್ರೆಸ್ ಉಪಕ್ರಮವು ರಾಜಕೀಯವಲ್ಲ ಎಂದಿದ್ದಾರೆ. ಸಂವಿಧಾನದ ಪ್ರಸ್ತಾವನೆ ಒಳಗೊಂಡಿರುವ ದೇಶದ ಚಿಂತನೆಯನ್ನು ಇದು ಪ್ರತಿನಿಧಿಸುತ್ತಿದೆ ಎಂದು ಅವರು ತಿಳಿಸಿದರು.

1990ರಲ್ಲಿ ಎಲ್.ಕೆ. ಅಡ್ವಾಣಿ ನೇತೃತ್ವದಲ್ಲಿ ನಡೆದ ರಥ ಯಾತ್ರೆಯಂತಹ ಯಾತ್ರೆಗಿಂತ  ಈ ಯಾತ್ರೆ ಹೇಗೆ ಭಿನ್ನ ಎಂದು ಪ್ರಶ್ನಿಸಿದಾಗ ಕನ್ಹಯ್ಯ ಕುಮಾರ್, ‘‘ಅದು ರಾಜಕೀಯ ಯಾತ್ರೆ. ಅಧಿಕಾರಕ್ಕಾಗಿ ನಡೆದ ರಥ ಯಾತ್ರೆ. ಇದು ಸತ್ಯಕ್ಕಾಗಿ ನಡೆಯುತ್ತಿರುವ ಯಾತ್ರೆ’’ ಎಂದರು.

ಅಡ್ವಾಣಿ ಅವರ ರಥ ಯಾತ್ರೆ ಹಾಗೂ ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ ನಡುವಿನ ಭಿನ್ನತೆಯನ್ನು ಒತ್ತಿ ಹೇಳಿದ ಅವರು, ‘‘ಅಡ್ವಾಣಿ ಅವರ ಯಾತ್ರೆಯ ನಕಾರಾತ್ಮಕ ಪರಿಣಾಮದ ಬಗ್ಗೆ ನಾನು ಹೇಳಲು ಬಯಸುವುದಿಲ್ಲ. ಅದರ ನಕಾರಾತ್ಮಕ ಪರಿಣಾವನ್ನು ದೇಶ ಕಂಡಿದೆ’’ ಎಂದರು. ಜನರ ನಿಲುವನ್ನು ಪ್ರತಿನಿಧಿಸುವ ಕಾಂಗ್ರೆಸ್ ಯಾತ್ರೆಯ ಹಿಂದೆ ಸಕಾರಾತ್ಮಕ ಮನಸ್ಥಿತಿ ಇದೆ ಎಂದು ಅವರು ಹೇಳಿದರು.

‘‘ಬಿಜೆಪಿ ಯಾತ್ರೆಯಿಂದ ಅಧಿಕಾರ ಪಡೆಯಿತು. ಆದರೆ ಕಾಂಗ್ರೆಸ್‌ನ ಈ ಯಾತ್ರೆ ಸತ್ಯವನ್ನು ಮರು ಸ್ಥಾಪಿಸಲಿದೆ’’ ಎಂದು ಅವರು ಹೇಳಿದರು. ‘‘ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಯಲು ಯಾವುದೇ ಭಾರತೀಯನಿಗೆ ಅವಕಾಶ ಸಿಕ್ಕಿರುವುದು ಅದೃಷ್ಟ. ನಾವು ಜನರನ್ನು ಭೇಟಿಯಾಗಲಿದ್ದೇವೆ. ವೈವಿಧ್ಯಮಯ ಸಂಸ್ಕೃತಿ, ಉಡುಪು ಹಾಗೂ ಭಾಷೆಗಳ ಅನುಭವ ಪಡೆಯಲಿದ್ದೇವೆ’’ ಎಂದು ಅವರು ಹೇಳಿದರು.

‘‘ದೇಶ ವಿಭಜನೆಯಾಗಿದೆ ಹಾಗೂ ಅದನ್ನು ಮರು ಸಂಘಟಿಸುವ ಅಗತ್ಯ ಇದೆ ಎಂಬ ಮಾತನ್ನು ನಾವು ಕೇಳುತ್ತಿದ್ದೇವೆ. ದೇಶ ಭೌಗೋಳಿಕವಾಗಿ ಹಾಗೂ ಚಾರಿತ್ರಿಕವಾಗಿ ವಿಭಜನೆಯಾಗಿಲ್ಲ. ಆದರೆ, ಪ್ರಸಕ್ತ ಸರಕಾರದ ಉದ್ದೇಶ ಹಾಗೂ ನೀತಿಗಳ ಬಗ್ಗೆ  ಪರಿಶೀಲಿಸಿದರೆ, ಶ್ರೀಮಂತರು ಹಾಗೂ ಬಡವರ ನಡುವೆ ದೊಡ್ಡ ಅಂತರ ಇರುವುದು ಕಂಡು ಬರುತ್ತದೆ’’ ಎಂದು ಅವರು ಹೇಳಿದರು.

ಕಾರ್ಪೊರೇಟ್‌ಗಳ ತೆರಿಗೆ ಮನ್ನಾ ಮಾಡಲಾಗುತ್ತಿದೆ. ಬಡ ಜನರ ಮೇಲೆ ಪರಿಣಾಮ ಉಂಟು ಮಾಡುವ ಹಾಲು ಹಾಗೂ ಮೊಸರಿನ ಮೇಲೆ ಜಿಎಸ್‌ಟಿ ಹಾಕಲಾಗುತ್ತಿದೆ ಎಂದು ಕನ್ಹಯ್ಯ ಕುಮಾರ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News