ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ರ‍್ಯಾಂಕ್‌ನಿಂದ ಮನನೊಂದು ನದಿಗೆ ಹಾರಿದ ವಿದ್ಯಾರ್ಥಿ
ಕುಂದಾಪುರ, ಸೆ.8: ವೈದ್ಯಕೀಯ ಶಿಕ್ಷಣಕ್ಕಾಗಿ ನಡೆದ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ರ‍್ಯಾಂಕ್ ಬಂದಿರುವುದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಸೇತುವೆ ಮೇಲಿನಿಂದ ಪಂಚಗಂಗಾವಳಿ ನದಿಗೆ ಹಾರಿದ ಘಟನೆ ಇಲ್ಲಿನ ಸಂಗಮ್ ಸೇತುವೆಯಲ್ಲಿ ಇಂದು ಅಪರಾಹ್ನ ನಡೆದಿದೆ.
ನದಿಗೆ ಹಾರಿ ನಾಪತ್ತೆಯಾಗಿರುವ ಯುವಕನನ್ನು ಕುಂದಾಪುರದ ವಡೇರಹೋಬಳಿ ಜೆಎಲ್ಬಿ ರಸ್ತೆಯ ನಿವಾಸಿ ರಘುವೀರ ಶೆಟ್ಟಿ ಎನ್ನುವವರ ಪುತ್ರ ಸಾಯೀಶ್ ಶೆಟ್ಟಿ (18) ಎಂದು ಗುರುತಿಸಲಾಗಿದೆ.
ಗುರುವಾರ ಅಪರಾಹ್ನ 12 ಗಂಟೆ ಸುಮಾರಿಗೆ ಸಾಯೀಶ್ ಶೆಟ್ಟಿ ತನ್ನ ಸೈಕಲ್‌ನಲ್ಲಿ ಸಂಗಮ್ ಸೇತುವೆಯ ಮೇಲೆ ಬಂದು, ಬಳಿಕ ಸೈಕಲ್ ಹಾಗೂ ಮೊಬೈಲ್ ಅನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾರೆ.
ಪಿಯುಸಿ ಕಲಿಯುವ ವೇಳೆ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಸಾಯೀಶ್ ಶೆಟ್ಟಿ, ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸೈಬರ್ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಬೇಸರಗೊಂಡು ಆತ್ಮಹತ್ಯೆ ಸಲುವಾಗಿ ನದಿಗೆ ಹಾರಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಸೇತುವೆ ಮೇಲಿಂದ ಯುವಕನೋರ್ವ ನದಿಗೆ ಹಾರುತ್ತಿರುವುದನ್ನು ಗಮನಿಸಿದ ವಾಹನ ಸವಾರರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಅಗ್ನಿಶಾಮಕದಳ, ಮುಳುಗು ತಜ್ಞರು ಹಾಗೂ ಸ್ಥಳೀಯರ ಸಹಾಯದಿಂದ ನಾಪತ್ತೆಯಾಗಿರುವಾತನ ಶೋಧದಲ್ಲಿ ತೊಡಗಿ ಕೊಂಡರು. ಕಾರ್ಯಾಚರಣೆ ಸಂಜೆವರೆಗೂ ನಡೆದಿತ್ತು.
ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದ ನದಿಯಲ್ಲಿ ನೀರಿನ ಹರಿವು ವಿಪರೀತವಾಗಿದ್ದು, ನೀರಿನ ಮಟ್ಟ ಜಾಸ್ತಿ ಇರುವುದರಿಂದ ಹಾಗೂ ಗುರುವಾರ ಮಧ್ಯಾಹ್ನದವರೆಗೆ ವ್ಯಾಪಕವಾಗಿ ಮಳೆ ಸುರಿದ ಕಾರಣ ಶೋಧ ಕಾರ್ಯಾಚರಣೆಗೆ ತೊಡಕಾಗಿತ್ತು. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಪಿಎಸ್‌ಐ ಸದಾಶಿವ ಗವರೋಜಿ ಭೇಟಿ ನೀಡಿದ್ದರು.
ಪೋಷಕರಿಂದ ನಾಪತ್ತೆ ದೂರು
ನದಿಗೆ ಯುವಕನೊಬ್ಬ ಹಾರುವುದನ್ನು ಕಂಡ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅವರು ಸೇತುವೆ ಮೇಲಿದ್ದ ಸೈಕಲ್ ಹಾಗೂ ಮೊಬೈಲ್ ಪರಿಶೀಲನೆ ನಡೆಸಿದಾಗ ಅದು ಸಾಯೀಶ್ ಶೆಟ್ಡಿಯವರದ್ದು ಎಂದು ತಿಳಿದು ಬಂದಿದೆ.
ಈ ಮಧ್ಯೆ ಆತ ಮನೆಯಿಂದ ನಾಪತ್ತೆಯಾಗಿದ್ದು ಪೋಷಕರು ಮಗನ ಕಾಣೆ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಯೀಶ್ ಮನೆಯಿಂದ ನಾಪತ್ತೆಯಾಗಿರುವುದು ಮತ್ತು ಬ್ರಿಡ್ಜ್ ಬಳಿ ಆತನ ಸೈಕಲ್ ಹಾಗೂ ಮೊಬೈಲ್ ಪತ್ತೆಯಾಗಿರುವುದು ಆತ್ಮಹತ್ಯೆಗೆ ಶರಣಾದ ಯುವಕ ಈತನೆ ಆಗಿರಬಹುದೆಂಬ ಶಂಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.
ಇದನ್ನೂ ಓದಿ: ಮಡಿಕೇರಿ: ಲಾಡ್ಜ್‌ನಲ್ಲಿ ಮಂಗಳೂರು ಶಿಕ್ಷಣ ಇಲಾಖೆಯ ನೌಕರ ಆತ್ಮಹತ್ಯೆ