×
Ad

ಏಶ್ಯಕಪ್ ಪಂದ್ಯ: ಶತಕದ ಬರ ನೀಗಿಸಿದ ವಿರಾಟ್ ಕೊಹ್ಲಿ

Update: 2022-09-08 21:06 IST
Photo:AP

ದುಬೈ, ಸೆ.8: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ ಗುರುವಾರ ನಡೆದ ಏಶ್ಯಕಪ್‌ನ ಕೊನೆಯ ಸೂಪರ್-4 ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ತಾನು ಸುದೀರ್ಘ ಸಮಯದಿಂದ ಎದುರಿಸುತ್ತಿದ್ದ ಅಂತರ್‌ರಾಷ್ಟ್ರೀಯ ಶತಕದ ಬರವನ್ನು ನೀಗಿಸಿಕೊಂಡರು. 2019ರ ನವೆಂಬರ್ ಬಳಿಕ ಕೊಹ್ಲಿ ಸಿಡಿಸಿದ 71ನೇ ಅಂತರ್‌ರಾಷ್ಟ್ರೀಯ ಶತಕ ಹಾಗೂ ಚೊಚ್ಚಲ ಟ್ವೆಂಟಿ-20 ಶತಕ ಇದಾಗಿದೆ. 2010ರ ತನ್ನ ಚೊಚ್ಚಲ ಪಂದ್ಯದಲ್ಲಿ ಔಟಾಗದೆ 94 ರನ್ ಗಳಿಸಿದ್ದು ಅವರ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು.

 ಕೊಹ್ಲಿ ಅವರು ಕೇವಲ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದ್ದಾರೆ.  19ನೇ ಓವರ್‌ನಲ್ಲಿ ಫರೀದ್ ಅಹ್ಮದ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಕೊಹ್ಲಿ ಚೊಚ್ಚಲ ಅಂತರ್‌ರಾಷ್ಟ್ರೀಯ ಟ್ವೆಂಟಿ-20 ಶತಕ ಸಿಡಿಸಿದರು. ಔಟಾಗದೆ 122 ರನ್ ಗಳಿಸಿದ ಕೊಹ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಟಿ-20 ಸ್ಕೋರ್ ಗಳಿಸಿದ ಸಾಧನೆಯನ್ನೂ ಮಾಡಿದರು.

2017ರಲ್ಲಿ ಇಂದೋರ್‌ನಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಗಳಿಸಿದ್ದ 118 ರನ್ ಇದುವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು. ಕೊಹ್ಲಿ ಈ ಹಿಂದೆ ಬಾಂಗ್ಲಾದೇಶದ ವಿರುದ್ಧ 2019ರಲ್ಲಿ ಅಂತರ್‌ರಾಷ್ಟ್ರೀಯ ಶತಕವನ್ನು ಸಿಡಿಸಿದ್ದರು. ಆ ನಂತರ ಅವರಿಗೆ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ.

ಭಾರತವು ಅಫ್ಘಾನ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಔಟಾಗದೆ 122 ರನ್(61 ಎಸೆತ, 12 ಬೌಂಡರಿ, 6 ಸಿಕ್ಸರ್)ಸಿಡಿಸಿದ್ದಾರೆ. ನಾಯಕ ಕೆ.ಎಲ್.ರಾಹುಲ್(62 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆ ನೀಡಿದರು.

ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ಹಾಗೂ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ಈ ಜೋಡಿ ಮೊದಲ ವಿಕೆಟಿಗೆ 119 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟಿತು. ರಾಹುಲ್ ಹಾಗೂ ಸೂರ್ಯಕುಮಾರ್(6 ರನ್) ಔಟಾದಾಗ ರಿಷಭ್ ಪಂತ್(ಔಟಾಗದೆ 20)ಜೊತೆ ಕೈಜೋಡಿಸಿದ ಕೊಹ್ಲಿ 3ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿ ತಂಡದ ಮೊತ್ತವನ್ನು 212ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News