×
Ad

ಮಂಗಳೂರು; ಎನ್‌ಐಎ ದಾಳಿ ಖಂಡಿಸಿ ಯುಎಪಿಎ ಕಾಯ್ದೆ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ

Update: 2022-09-08 22:53 IST

ಮಂಗಳೂರು, ಸೆ.8: ಸರಕಾರಿ ಪ್ರಾಯೋಜಿತ ಎನ್‌ಐಎ ದಾಳಿಯನ್ನು ಖಂಡಿಸಿ ‘ಯುಎಪಿಎ’ ಕಾಯ್ದೆ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಗುರುವಾರ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಿತು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಮಾತನಾಡಿ ರಾಜ್ಯದಲ್ಲಿ ಎನ್‌ಐಎ ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ. ಸಂಘಪರಿವಾರ, ಬಿಜೆಪಿಯ ಗುಲಾಮಗಿರಿ ಮಾಡುತ್ತಿವೆ. ಮುಸಲ್ಮಾನರ ಬೇಟೆಯಾಡುತ್ತಿವೆ. ಬಿಜೆಪಿ, ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕಲು ನೋಡುತ್ತಿವೆ. ಎಸ್‌ಡಿಪಿಐ ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆಯವರ ಮನೆಗೆ ಇಂದು ತೆರಳಿ ಪರಿಶೀಲನೆ ನಡೆಸಿರುವುದು ಅದಕ್ಕೊಂದು ಉದಾಹರಣೆಯಾಗಿದೆ. ಇಂತಹ ದಾಳಿ, ತಪಾಸಣೆಯಿಂದ ನಾವು ಧೃತಿಗೆಡುವುದಿಲ್ಲ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇನ್ನೂ ಮುಂದುವರಿಯಲಿದೆ ಎಂದರು.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ನಾಯಕ ಜಾಫರ್ ಸ್ವಾದಿಕ್ ಫೈಝಿ ಮಾತನಾಡಿ ಇತ್ತೀಚೆಗೆ ನಡೆದ ಸರಣಿ ಕೊಲೆಯ ಬಳಿಕ ಬಿಜೆಪಿ-ಸಂಘಪರಿವಾರವು ಎನ್‌ಐಎ ಮೂಲಕ ಜಿಲ್ಲೆಯಲ್ಲಿ ಭಯದ ವಾತವಾರಣ ಸೃಷ್ಟಿಸಿದೆ. ನಮ್ಮ ಮೌನಕ್ಕೂ ಒಂದು ಮಿತಿ ಇದೆ.  ಸಹನೆಯ ಕಟ್ಟೆಯೊಡೆಯುವ ಮುನ್ನ ಎನ್‌ಐಎ ಜಿಲ್ಲೆಯಿಂದ ಗಂಟುಮೂಟೆ ಕಟ್ಟಿಕೊಂಡು ಹೋಗಬೇಕು ಎಂದು ಎಚ್ಚರಿಸಿದರು.

ವಿಮೆನ್ಸ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ನಾಯಕಿ ಶಾಹಿದಾ ತಸ್ನೀಂ ಮಾತನಾಡಿ ಬಿಜೆಪಿ ಸರಕಾರದ ಗುಲಾಮರಿಗಿರಿಯಿಂದ ಎನ್‌ಐಎ ಮೊದಲು ಹೊರಗೆ ಬಂದು ಮುಕ್ತವಾಗಿ ಕಾರ್ಯಾಚರಿಸಬೇಕು. ಎನ್‌ಐಎಯಿಂದ ನಮ್ಮ ಬಾಯ್ಮಿಚ್ಚಿಸಲು ಯಾವತ್ತೂ ಸಾಧ್ಯವಿಲ್ಲ. ಗುಮ್ಮನ ಕಥೆ ಹೇಳಿಕೊಂಡು ಹೆದರಿಸುವ ಪ್ರಯತ್ನವವನ್ನು ತಕ್ಷಣ ನಿಲ್ಲಿಸಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ಜಿಲ್ಲೆಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ನಡೆದ ಮೂರು ಕೊಲೆ ಪ್ರಕರಣವನ್ನು ಸರಕಾರ ನಿಭಾಯಿಸಿದ ಕ್ರಮ ಸರಿಯಿಲ್ಲ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೊಂದು ನ್ಯಾಯ. ಬೆಳ್ಳಾರೆಯ ಮಸೂದ್ ಮತ್ತು ನನ್ನ ಮಗ ಫಾಝಿಲ್‌ನ ಕೊಲೆ ಪ್ರಕರಣಕ್ಕೆ ಇನ್ನೊಂದು ನ್ಯಾಯ. ಇದು ಎಷ್ಟು ಸರಿ? ನಮ್ಮ ಮನೆಗೆ ಇನ್ನೂ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಸ್ಥಳೀಯ ಜನ್ರಪತಿನಿಧಿಗಳು ಭೇಟಿ ನೀಡುವ ಸೌಜನ್ಯ ತೋರಿಲ್ಲ ಎಂದು ಕೊಲೆಯಾದ ಮಂಗಳಪೇಟೆಯ ಫಾಝಿಲ್‌ನ ತಂದೆ ಉಮ್ಮರ್ ಫಾರೂಕ್ ಹೇಳಿದರು.
ಹೋರಾಟ ಸಮಿತಿಯ ಸಂಚಾಲಕ ಸುಹೈಲ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕು ಹೋರಾಟಗಾರ ಕಬೀರ್ ಉಳ್ಳಾಲ್, ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಝೀಝ್ ಸುರತ್ಕಲ್, ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಜಾಸ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News