ಬ್ರಿಟನ್ ರಾಣಿ ನಿಧನಕ್ಕೂ ಆಪರೇಶನ್ ಲಂಡನ್ ಬ್ರಿಡ್ಜ್ ಗೂ ಏನು ನಂಟು ?

Update: 2022-09-08 18:41 GMT
Photo: PTI

ಲಂಡನ್: ವಯೋಸಹಜ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಬ್ರಿಟನ್‌ ರಾಣಿ ಎಲಿಝಬೆತ್ II( Queen Elizabeth) ನಿಧನರಾಗಿದ್ದಾರೆ. ರಾಣಿ ಎಲಿಝಬೆತ್ ನಿಧನದ ನಂತರ ಏನಾಗುತ್ತದೆ ಎನ್ನುವುದನ್ನು ಬ್ರಿಟನ್ ಸರ್ಕಾರ ಮೊದಲೇ ಸಂಪೂರ್ಣ ಯೋಜನೆ ಮಾಡಿದ್ದು, ಈ ಸಂಪೂರ್ಣ ಯೋಜನೆಗೆ 'ಆಪರೇಷನ್ ಲಂಡನ್ ಬ್ರಿಡ್ಜ್'(Operation London Bridge) ಎಂಬ ಸಾಂಕೇತಿಕ ನಾಮವನ್ನು‌ (ಕೋಡ್) ನೀಡಲಾಗಿದೆ. ಈ ಯೋಜನೆಯನ್ನು ಹಲವು ವರ್ಷಗಳಿಂದ ರಹಸ್ಯವಾಗಿಡಲಾಗಿತ್ತು, ಆದರೆ ಕೆಲವು ವರ್ಷಗಳ ಹಿಂದೆ ಇದರ ಬಗ್ಗೆ ಹಲವು ಪ್ರಮುಖ ಮಾಹಿತಿಗಳು ಹೊರಬಿದ್ದಿದ್ದವು.

ಅದರ ಪ್ರಕಾರ, ರಾಣಿಯ ಸಾವಿನ ಸುದ್ದಿಯನ್ನು, ಪ್ರಧಾನಿ ಲಿಝ್ ಟ್ರಸ್ ಅವರಿಗೆ ದೂರವಾಣಿ ಕರೆ ಮೂಲಕ ತಿಳಿಸಲಾಗುವುದು. ಸರ್ಕಾರಿ ಅಧಿಕಾರಿಯೊಬ್ಬರು ಕೋಡ್ ಮೂಲಕ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸುತ್ತಾರೆ. ಈ ಅಧಿಕಾರಿ ಅವರಿಗೆ, 'ಲಂಡನ್ ಬ್ರಿಡ್ಜ್ ಇನ್ ಡೌನ್' (ಲಂಡನ್‌ ಸೇತುವೆ ಕುಸಿದಿದೆ) ಎಂದು ಹೇಳುವರು. ಹಾಗೆ ಹೇಳಿದರೆ ರಾಣಿ ಮೃತಪಟ್ಟಿದ್ದಾರೆ ಎಂದು ಅರ್ಥ. ಇದಾದ ನಂತರ ಅವರ ಸಾವಿನ ಸುದ್ದಿಯನ್ನು ಪ್ರೆಸ್ ಅಸೋಸಿಯೇಷನ್  ನಲ್ಲಿ ನ್ಯೂಸ್‌ಫ್ಲಾಶ್ ಮೂಲಕ ಪ್ರಕಟಿಸಲಾಗುವುದು. ಆಗ ರಾಜಮನೆತನದವರು ಸಕಲ ಸಿದ್ಧತೆಯಲ್ಲಿ ತೊಡಗುತ್ತಾರೆ. ಪ್ರಿನ್ಸ್ ಚಾರ್ಲ್ಸ್ ಅವರನ್ನು ಹೊಸ ರಾಜ ಎಂದು ಘೋಷಿಸಲಾಗುತ್ತದೆ. 

ಏತನ್ಮಧ್ಯೆ, ಬಕಿಂಗ್ಹ್ಯಾಮ್ ಅರಮನೆ, ರಾಜಮನೆತನದ ಹೊರಗೆ ಹಾದುಹೋಗುವ ಹಾದಿಯಲ್ಲಿ ಸುದ್ದಿಯನ್ನು ಪ್ರದರ್ಶಿಸಲಾಗುತ್ತದೆ. ಯುಕೆಯಾದ್ಯಂತ ಎಲ್ಲಾ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ.

ಯುನೈಟೆಡ್ ಕಿಂಗ್‌ಡಮ್‌ನ ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಆಗಿರುವ BBC (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಮೂಲಕ ರಾಷ್ಟ್ರೀಯ ತುರ್ತು ಪರಿಸ್ಥಿತಿಗಳಿಗಾಗಿ ಎಚ್ಚರಿಕೆಯನ್ನು ಸಕ್ರಿಯಗೊಳಿಸುತ್ತದೆ.

ಪ್ರಧಾನಿಗೆ ರಾಣಿಯ ಸಾವಿನ ಸುದ್ದಿಯನ್ನು ತಿಳಿಸಿದ ನಂತರ ಗವರ್ನರ್ ಜನರಲ್, ರಾಯಭಾರಿಗಳು ಮತ್ತು ಇತರ ಮಂತ್ರಿಗಳಿಗೆ ಈ ಬಗ್ಗೆ ತಿಳಿಸಲಾಗುತ್ತದೆ.

65 ವರ್ಷಗಳ ಹಿಂದೆ ಮಹಾರಾಜ ಜಾರ್ಜ್ VI ನಿಧನರಾದಾಗ, 'ಹೈಡ್ ಪಾರ್ಕ್ ಕಾರ್ನರ್' ಎಂಬ ಕೋಡ್‌ ಅನ್ನು ಬಳಸಲಾಗಿತ್ತು.  6 ಫೆಬ್ರವರಿ 1952 ರಂದು, ಮಹಾರಾಜ ಜಾರ್ಜ್‌ ಬೆಳಿಗ್ಗೆ 7:30 ಕ್ಕೆ ನಿಧನರಾದರು. ಆದರೆ ಈ ಸುದ್ದಿಯನ್ನು ಬಿಬಿಸಿ ಬೆಳಗ್ಗೆ 11:15ಕ್ಕೆ ಪ್ರಕಟಿಸಿತ್ತು. ಆದರೆ ರಾಜಕುಮಾರಿ ಡಯಾನಾ 31 ಆಗಸ್ಟ್ 1997 ರಂದು ಪ್ಯಾರಿಸ್‌ನಲ್ಲಿ ಮುಂಜಾನೆ 4 ಗಂಟೆಗೆ ನಿಧನರಾದಾಗ, ಮಾಜಿ ವಿದೇಶಾಂಗ ಸಚಿವ ರಾಬಿನ್ ಕುಕ್ ಅವರೊಂದಿಗೆ ಫಿಲಿಪೈನ್ಸ್‌ಗೆ ಹೋದ ಕೆಲವು ಪತ್ರಕರ್ತರು ಕೇವಲ 15 ನಿಮಿಷಗಳಲ್ಲಿ ಆ ಸುದ್ದಿಯ ಬಗ್ಗೆ ತಿಳಿದುಕೊಂಡಿದ್ದರು. ಅಂತೆಯೇ, ರಾಣಿಯ ಸಾವಿನ ಕುರಿತು ಮೊದಲು ಪ್ರೆಸ್ ಅಸೋಸಿಯೇಷನ್‌ನಲ್ಲಿ ಸುದ್ದಿ ಬರುತ್ತದೆ. ಅದರ ನಂತರ ವಿಶ್ವದಾದ್ಯಂತದ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ಈ ಕಾರ್ಯಯೋಜನೆಯಲ್ಲಿ ನಿರ್ಧರಿಸಲಾಗಿತ್ತು.

ರಾಣಿಯ ಅಂತ್ಯಕ್ರಿಯೆಯು ಅವರ ಮರಣದ 10 ದಿನಗಳ ನಂತರ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News