ಬ್ರಿಟನ್ ರಾಣಿ ಎಲಿಝಬೆತ್ ಯುಗಾಂತ್ಯ; 73ನೇ ವಯಸ್ಸಿನಲ್ಲಿ ರಾಜನಾದ ಚಾರ್ಲ್ಸ್

Update: 2022-09-09 01:55 GMT

ಲಂಡನ್: ಬ್ರಿಟಿಷ್ ಇತಿಹಾಸದಲ್ಲೇ ಸುಧೀರ್ಘ ಆಡಳಿತ ನಡೆಸಿದ ಮತ್ತು ಅತಿ ಹೆಚ್ಚು ವರ್ಷ ಬದುಕಿದ ರಾಜವಂಶಸ್ಥೆ ಎನಿಸಿದ ರಾಣಿ ಎಲಿಝಬೆತ್-2 (96) ಅವರು ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅವರ ಹಿರಿಯ ಪುತ್ರ ರಾಜಕುಮಾರ ಚಾರ್ಲ್ಸ್ (Charles) ಇದೀಗ ಬ್ರಿಟನ್‍ನ ರಾಜ ಎನಿಸಿದ್ದಾರೆ. ಅವರ ಪತ್ನಿ ಕೆಮಿಲ್ಲಾ ರಾಣಿಯಾಗಿದ್ದಾರೆ.

2ನೇ ರಾಣಿ ಎಲಿಝಬೆತ್ ಅವರ ಏಳು ದಶಕಗಳ ಆಡಳಿತಾವಧಿ ವಿಶ್ವದ ಅತಿ ಸುಧೀರ್ಘ ಆಡಳಿತ ನಡೆಸಿದ ರಾಜವಂಶಸ್ಥೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

"ರಾಣಿ ಗುರುವಾರ ಮಧ್ಯಾಹ್ನ ಬಲ್ಮೋರಲ್‍ನಲ್ಲಿ ಸುಖಮರಣ ಕಂಡಿದ್ದಾರೆ. ರಾಜ ಮತ್ತು ಸಂಗಾತಿ ರಾಣಿ ಬಲ್ಮೊರಲ್‍ನಲ್ಲೇ ಇದ್ದು, ನಾಳೆ ಲಂಡನ್‍ಗೆ ಆಗಮಿಸಲಿದ್ದಾರೆ" ಎಂದು ಬಕಿಂಗ್‍ಹ್ಯಾಮ್ ಪ್ಯಾಲೇಸ್‍ನ ಪ್ರಕಟಣೆ ಹೇಳಿದೆ.

ರಾಜ ಚಾರ್ಲ್ಸ್ ಅವರು ಬಕಿಂಗ್‍ಹ್ಯಾಂ ಅರಮನೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ, "ನಮ್ಮ ಪ್ರೀತಿಪಾತ್ರ ತಾಯಿ, ಗೌರವಾನ್ವಿತ ರಾಣಿಯ ಮರಣದ ಸಂದರ್ಭ ನನಗೆ ಹಾಗೂ ಕುಟುಂಬಕ್ಕೆ ಅತ್ಯಂತ ಬೇಸರದ ಸಂಗತಿ. ಹೆಮ್ಮೆಯಿಂದ ಅವರ ಅಂತ್ಯಕ್ಕೆ ನಾವು ಶೋಕಾಚರಿಸುತ್ತೇವೆ. ಇಡೀ ದೇಶಾದ್ಯಂತ,  ಕಾಮನ್‍ವೆಲ್ತ್ ಹಾಗೂ ವಿಶ್ವಾದ್ಯಂತ ಅವರ ಸಾವಿನ ಸಂಗತಿ ಭಾರಿ ಬೇಸರಕ್ಕೆ ಕಾರಣವಾಗುತ್ತದೆ ಎನ್ನುವುದು ನನಗೆ ತಿಳಿದಿದೆ" ಎಂದು ಬಣ್ಣಿಸಿದ್ದಾರೆ.

ಎಲಿಝಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ 99ನೇ ವಯಸ್ಸಿನಲ್ಲಿ 2021ರ ಏಪ್ರಿಲ್ 9ರಂದು ಕೊನೆಯುಸಿರೆಳೆದಿದ್ದರು. ಇದೀಗ ಚಾರ್ಲ್ಸ್ ತಮ್ಮ 73ನೇ ವರ್ಷದಲ್ಲಿ ರಾಜಪದವಿಗೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News