ಪರಮಾಣು ಶಕ್ತ ರಾಷ್ಟ್ರವೆಂದು ಘೋಷಿಸಿಕೊಂಡ ಉತ್ತರ ಕೊರಿಯಾ

Update: 2022-09-09 17:32 GMT
photto : cnn

ಪ್ಯೋಂಗ್ಯಾಂಗ್, ಸೆ.9: ಉತ್ತರ ಕೊರಿಯಾ ಪರಮಾಣು ಶಕ್ತ ರಾಷ್ಟ್ರ ಎಂದು ಘೋಷಿಸಿರುವ  ಅಧ್ಯಕ್ಷ ಕಿಮ್ ಜಾಂಗ್ ಉನ್, ಅಮೆರಿಕದ ಆಕ್ರಮಣಗಳನ್ನು ಎದುರಿಸಲು ಈ ಅಸ್ತ್ರ ಅತ್ಯಗತ್ಯ ಆಗಿರುವುದರಿಂದ ಅವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ದೃಢಪಡಿಸಿದ್ದಾರೆ.

ಉತ್ತರ ಕೊರಿಯಾದ ರಕ್ಷಣಾ ಸಾಮಥ್ರ್ಯವನ್ನು ದುರ್ಬಲಗೊಳಿಸಿ, ಸರಕಾರವನ್ನು ಪದಚ್ಯುತಗೊಳಿಸುವ ಗುರಿಯನ್ನು ಹೊಂದಿರುವ ಅಮೆರಿಕ ಈ ನಿಟ್ಟಿನಲ್ಲಿ ಒತ್ತಡದ ಅಭಿಯಾನ ಆರಂಭಿಸಿದೆ ಎಂದು ಕಿಮ್ ಜಾಂಗ್ ಆರೋಪಿಸಿದ್ದಾರೆ.

ಉತ್ತರ ಕೊರಿಯಾದ ನಾಮಕಾವಸ್ತೆ ಸಂಸತ್‍ನ ಅಧಿವೇಶನವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಕಿಮ್, ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿದರೆ ಪರಮಾಣು ಶಸ್ತ್ರಗಳ ಮೂಲಕ ಉತ್ತರಿಸಲಾಗುವುದು ಎಂದರು. ಈ ಮಧ್ಯೆ, ನಾಯಕತ್ವವು ದಾಳಿಗೆ ಒಳಗಾದರೆ ಶತ್ರುಪಡೆಯ ವಿರುದ್ಧ ಪರಮಾಣು ದಾಳಿಗಳನ್ನು ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸಲು ಉತ್ತರ ಕೊರಿಯಾದ ಮಿಲಿಟರಿಗೆ ಅಧಿಕಾರ ನೀಡುವ ಹೊಸ ಕಾಯ್ದೆಗೆ ಸಂಸತ್ ಸದಸ್ಯರು ಗುರುವಾರ ಅನುಮೋದನೆ ನೀಡಿದ್ದಾರೆ.

ಹೊಸ ಕಾನೂನು ದೇಶದ ಪರಮಾಣು ಸ್ಥಾನಮಾನವನ್ನು ಕಾಯಂಗೊಳಿಸಿದೆ. ಪರಮಾಣು ಶಸ್ತ್ರಾಸ್ತ್ರ  ನೀತಿಯನ್ನು ಕಾನೂನುಬದ್ಧಗೊಳಿಸುವ ಉದ್ದೇಶವು ನಮ್ಮ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಯಾವುದೇ ಚೌಕಾಶಿಗೆ ಆಸ್ಪದ ನೀಡದಿರುವುದಾಗಿದೆ. ಅವರು ನಮ್ಮ ಮೇಲೆ 100 ದಿನ, ಸಾವಿರ ದಿನ , 10 ವರ್ಷ ಅಥವಾ 100 ವರ್ಷ ನಿರ್ಬಂಧ ವಿಧಿಸಲಿ. ನಮ್ಮ ದೇಶ ಮತ್ತು ಜನರ ಅಸ್ತಿತ್ವ ಮತ್ತು ಸುರಕ್ಷತೆಯನ್ನು ಕಾಪಾಡುವ ಆತ್ಮರಕ್ಷಣೆಗಾಗಿ ಪರಮಾಣು ಶಸ್ತ್ರಗಳನ್ನು ಹೊಂದುವ ಹಕ್ಕನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದವರು ಹೇಳಿದ್ದಾರೆ.

ಕಿಮ್ ಅವರ ಹೇಳಿಕೆ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಒತ್ತಿ ಹೇಳಿವೆ. ಇತ್ತೀಚಿನ ದಿನಗಳಲ್ಲಿ ಅವರು ಅಮೆರಿಕ ಮತ್ತು ಏಶ್ಯಾದಲ್ಲಿನ ಅದರ ಮಿತ್ರದೇಶಗಳ ವಿರುದ್ಧ ಪರಮಾಣು ಆಕ್ರಮಣದ ಪ್ರಚೋದನಕಾರಿ ಬೆದರಿಕೆಗಳನ್ನು ನೀಡಿದ್ದಾರೆ. ದೇಶಕ್ಕೆ ಯಾವುದೇ ದೇಶದಿಂದ ಬೆದರಿಕೆ ಎದುರಾದರೆ ಪರಮಾಣು ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಕಿಮ್ ಘೋಷಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News