×
Ad

ಬಿಹಾರ: ಜಪ್ತಿ ಮಾಡಲಾದ ಮದ್ಯದ ಬಾಟಲಿಗಳಿಂದ ಬಳೆಗಳನ್ನು ತಯಾರಿಸಲು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ನೆರವು

Update: 2022-09-10 20:09 IST
PHOTO : THR NEW INDIAN EXPRESS

ಪಾಟ್ನಾ,ಸೆ.10: ಮದ್ಯಪಾನ ನಿಷೇಧಿತ ರಾಜ್ಯವಾಗಿರುವ ಬಿಹಾರವು ತ್ಯಾಜ್ಯಗಳನ್ನು ಕಡಿಮೆ ಮಾಡುವ ಮತ್ತು ಜೀವನೋಪಾಯವನ್ನು ಒದಗಿಸುವ ಪ್ರಯತ್ನವಾಗಿ ವಶಪಡಿಸಿಕೊಳ್ಳಲಾದ ಮದ್ಯದ ಬಾಟಲಿಗಳಿಂದ ಗಾಜಿನ ಬಳೆಗಳ ತಯಾರಿಕೆಗೆ ಗ್ರಾಮೀಣ ಮಹಿಳೆಯರನ್ನು ಉತ್ತೇಜಿಸುತ್ತಿದೆ. ರಾಜ್ಯ ಸರಕಾರದ ಮದ್ಯಪಾನ ತಡೆ ಇಲಾಖೆಯು ಗ್ರಾಮೀಣ ಜೀವನೋಪಾಯ ಕಾರ್ಯಕ್ರಮ ‘ಜೀವಿಕಾ’ದಡಿ ಮಹಿಳೆಯರಿಂದ ಬಳೆ ತಯಾರಿಕೆ ಘಟನೆಗಳ ಸ್ಥಾಪನೆಗೆ ಬೀಜಧನವಾಗಿ ಒಂದು ಕೋ.ರೂ.ಗಳನ್ನು ಮಂಜೂರು ಮಾಡಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಬೃಹತ್ ಪ್ರಮಾಣದಲ್ಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಜಫ್ತಿ ಮಾಡಲಾದ ಬಾಟಲಿಗಳನ್ನು ನಾಶಗೊಳಿಸುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ. ಬುಲ್ಡೋಝರ್ಗಳನ್ನು ಬಳಸಿ ಬಾಟಲಿಗಳನ್ನು ಪುಡಿ ಮಾಡಲಾಗುತ್ತಿದೆ.

ಈಗ ಇಲಾಖೆಯು ಪುಡಿ ಮಾಡಲಾದ ಬಾಟಲಿಗಳನ್ನು ಗಾಜಿನ ಬಳೆಗಳನ್ನು ತಯಾರಿಸಲು ಕಚ್ಚಾ ವಸ್ತುವಾಗಿ ಜೀವಿಕಾ ಕಾರ್ಮಿಕರಿಗೆ ಒದಗಿಸಲಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯು ಗಾಜಿನ ಬಳೆಗಳ ತಯಾರಿಕೆಗಾಗಿ ಜೀವಿಕಾ ಕಾರ್ಮಿಕರ ಗುಂಪೊಂದಕ್ಕೆ ತರಬೇತಿ ನೀಡುತ್ತಿದೆ ಎಂದು ಪಾನನಿಷೇಧ ಮತ್ತು ಅಬಕಾರಿ ಸಚಿವ ಸುನಿಲ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಬ್ಯಾಂಕ್ ನೆರವಿನ ಜೀವಿಕಾ ಯೋಜನೆಯು ಬಡತನ ನಿವಾರಣೆಯ ಗುರಿಯನ್ನು ಹೊಂದಿದೆ. ಬಳೆ ತಯಾರಿಕೆ ಉಪಕ್ರಮದ ಕುರಿತು ತನ್ನ ಇಲಾಖೆಯು ಪಾನನಿಷೇಧ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ ಕುಮಾರ್ ತಿಳಿಸಿದರು. ಬಿಹಾರದಲ್ಲಿ ಎಪ್ರಿಲ್ 2016ರಿಂದ ಪಾನನಿಷೇಧ ಜಾರಿಗೊಂಡಿದೆ. ಈ ವರ್ಷದ ಜನವರಿ ಮತ್ತು ಮೇ ನಡುವೆ ರಾಜ್ಯದಲ್ಲಿ 13.87 ಲ.ಲೀ.ಗೂ ಅಧಿಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News