ಪೂರ್ವ ವಲಯದಲ್ಲಿ ಉಕ್ರೇನ್ ಸೇನೆ ಮೇಲುಗೈ: ವರದಿ

Update: 2022-09-10 15:45 GMT

ಕೀವ್, ಸೆ.10: ಪೂರ್ವ ಪ್ರಾಂತದಲ್ಲಿ ರಶ್ಯ ವಶಪಡಿಸಿಕೊಂಡಿದ್ದ ಹಲವು ಪ್ರದೇಶಗಳನ್ನು ಮರಳಿಪಡೆಯಲು  ಉಕ್ರೇನ್ ಸೇನೆ ಯಶಸ್ವಿಯಾಗಿದ್ದು ಖಾರ್ಕಿವ್ ಸೇರಿದಂತೆ ಹಲವು ವಲಯಗಳಲ್ಲಿ ರಶ್ಯದ ಮುಂಚೂಣಿ ಪಡೆ ಹಿಮ್ಮೆಟ್ಟಿದೆ ಎಂದು ವರದಿಯಾಗಿದೆ.

 ಸುಮಾರು 7 ತಿಂಗಳಿನಿಂದ ಮುಂದುವರಿದಿರುವ ರಶ್ಯ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.‌

ಖಾರ್ಕಿವ್ ಪ್ರಾಂತದಲ್ಲಿ ತನಗೆ ಹಿನ್ನಡೆಯಾಗಿರುವುದನ್ನು ರಶ್ಯವೂ ಒಪ್ಪಿಕೊಂಡಿದೆ. "ಮುನ್ನುಗ್ಗಿ ಬರುತ್ತಿರುವ ಶತ್ರುಪಡೆಯ ಧಾವಂತವನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ವಿಳಂಬಿಸಲಾಗಿದೆ. ಆದರೆ ಹಲವು ಪ್ರದೇಶಗಳು ಈಗಾಗಲೇ ಶತ್ರುಸೇನೆಯ ವಶಕ್ಕೆ ಬಂದಿದೆ" ಎಂದು ಖಾರ್ಕಿವ್ ವಲಯವನ್ನು ವಶಪಡಿಸಿಕೊಂಡ ಬಳಿಕ ರಶ್ಯದ ನೇಮಿಸಿದ್ದ ಆಡಳಿತಾಧಿಕಾರಿ ವಿಟಾಲಿ ಗ್ಯಾನ್ಚೆವ್ ಟಿವಿ ವಾಹಿನಿಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ನಮ್ಮ ಸೇನೆ, ಗುಪ್ತಚರ ದಳ ಮತ್ತು ಭದ್ರತಾ ವಿಭಾಗದ ಸಕ್ರಿಯ ಕಾರ್ಯಾಚರಣೆಯಿಂದಾಗಿ ಇದುವರೆಗೆ ಖಾರ್ಕಿವ್ ವಲಯದ 30ಕ್ಕೂ ಅಧಿಕ ವಸಾಹತುಗಳು ಮತ್ತೆ ನಮ್ಮ ವಶಕ್ಕೆ ಬಂದಿವೆ. ಪೂರ್ವದ ಡೊನ್ಬಾಸ್ ಮತ್ತು ದಕ್ಷಿಣದಲ್ಲಿ ಹೋರಾಟ ಮುಂದುವರಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಪೂರ್ವ ಪ್ರಾಂತದಲ್ಲಿರುವ ಅತ್ಯಂತ ಆಯಕಟ್ಟಿನ ಪ್ರದೇಶ ಇಝಿಯಂ ನಗರದ ಮೇಲಿನ ಹಿಡಿತವನ್ನು ರಶ್ಯ ಸೇನೆ ಕಳೆದುಕೊಂಡಿದ್ದು ನೂರಾರು ರಶ್ಯನ್ನರು ಮೃತಪಟ್ಟಿದ್ದು ಇತರ ಹಲವರನ್ನು ಬಂಧಿಸಲಾಗಿದೆ ಎಂದು ಝೆಲೆನ್ಸ್ಕಿಯ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಚ್ ಹೇಳಿದ್ದಾರೆ.

ಫೆಬ್ರವರಿ 24ರಂದು ಆಕ್ರಮಣ ಆರಂಭಿಸಿದ್ದ ರಶ್ಯ ಪ್ರಾರಂಭದಲ್ಲಿ ವೇಗವಾಗಿ ಮುಂದುವರಿದು ಉಕ್ರೇನ್ನ ಐದನೇ ಒಂದರಷ್ಟು ಪ್ರದೇಶವನ್ನು ವಶಕ್ಕೆ ಪಡೆಯಲು ಶಕ್ತವಾಗಿತ್ತು. ಆದರೆ ಕ್ರಮೇಣ ಪ್ರತಿಹೋರಾಟ ತೀವ್ರಗೊಳಿಸಿರುವ ಉಕ್ರೇನ್, ಒಂದೊಂದೇ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ. ಪೂರ್ವ ಪ್ರಾಂತವನ್ನು ರಕ್ಷಿಸಿಕೊಳ್ಳಲು ಹೆಚ್ಚುವರಿ ಪಡೆಯನ್ನು ರವಾನಿಸಿರುವುದಾಗಿ ರಶ್ಯ ಸೇನೆ ಹೇಳಿದೆ. ಈ ಮಧ್ಯೆ, ಉಕ್ರೇನ್ ಪಡೆಗಳ ಮುನ್ನಡೆಯಿಂದಾಗಿ ಪೂರ್ವ ಪ್ರಾಂತದೊಂದಿಗೆ ರಶ್ಯ ಸೇನೆಯ ಸಂಪರ್ಕ ಕಡಿತಗೊಂಡಿದ್ದು ಈ ವಲಯದಲ್ಲಿ ಸಾವಿರಾರು ರಶ್ಯನ್ ಯೋಧರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ.

ಖೆರ್ಸಾನ್ ಬಳಿಕ ಈಗ ಖಾರ್ಕಿವ್ನಲ್ಲಿಯೂ ಗಮನಾರ್ಹ ಯಶಸ್ಸು ಸಾಧ್ಯವಾಗಿದ್ದು ಇದು ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News