ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
Update: 2022-09-11 19:43 IST
ಮಲ್ಪೆ, ಸೆ.11: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವ ರಕ್ಷಕ ತಂಡ ರಕ್ಷಿಸಿರುವ ಘಟನೆ ಮಲ್ಪೆ ಬೀಚ್‌ನ ಪಂಚಾಕ್ಷರಿ ಭಜನಾ ಮಂದಿರದ ಸಮೀಪ ರವಿವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ.
ರಕ್ಷಣೆಗೊಳಗಾದವರನ್ನು ಹಾಸನ ಜಿಲ್ಲೆಯ ಸಕಲೇಶಪುರದ ಸಾಗರ್ (26) ಹಾಗೂ ಅವಿನಾಶ್(26) ಎಂದು ಗುರುತಿಸಲಾಗಿದೆ. ಇವರು ಚಾಲಕ ವೃತ್ತಿ ಮಾಡುತ್ತಿದ್ದು, ರವಿವಾರ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಅಲ್ಲಿ ಸಮುದ್ರದ ನೀರಿನಲ್ಲಿ ಆಡುತ್ತಿದ್ದ ಇವರಿಬ್ಬರು ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿ ಮುಳುಗುತ್ತಿದ್ದರೆನ್ನಲಾಗಿದೆ.
ಇದನ್ನು ಗಮನಿಸಿದ ಮಲ್ಪೆ ಬೀಚ್‌ನ ಜೀವ ರಕ್ಷಕರಾದ ಜನಾರ್ದನ, ವಿನೋದ್, ಪಾಂಡು, ವರ್ಷದ್ ಎಂಬವರು ಕೂಡಲೇ ಕಾರ್ಯಪ್ರವೃತ್ತರಾಗಿ ನೀರಿನಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿ ತೀರಕ್ಕೆ ಕರೆತಂದಿದ್ದಾರೆ. ವಾರಾಂತ್ಯ ಆಗಿರುವುದರಿಂದ ಇಂದು ಮಲ್ಪೆ ಬೀಚ್ ಜನಜಂಗುಳಿಯಿಂದ ತುಂಬಿತ್ತು.