ಸರಕಾರದಿಂದ ಕೊರಗ ಸಮುದಾಯಕ್ಕೆ ಅವಮಾನ, ಅನ್ಯಾಯ: ಗೌರಿ

Update: 2022-09-12 10:25 GMT

ಉಡುಪಿ, ಸೆ.12: ಕೊರಗ ಸಮುದಾಯದವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಮತ್ತು ಜನಸಂಖ್ಯೆ ಕ್ಷೀಣಿಸುತ್ತಿದೆ. ಆದರೂ ಸರಕಾರ ಖಾಸಗಿ ಆಸ್ಪತ್ರೆಗೆ ನೀಡುವ ಕೊರಗ ವೈದ್ಯಕೀಯ ವೆಚ್ಚದ ಹಣವನ್ನು ರದ್ದು ಮಾಡುವಂತೆ ಸರಕಾರ ಆದೇಶಿಸಿದೆ. ಇದಕ್ಕೆ ಕಾರಣವಾಗಿ ಕೊರಗರು ಕುಡಿತ ಹಾಗೂ ದುಶ್ಚಟದಿಂದ ಸಾಯುತ್ತಿದ್ದಾರೆಂಬ ಪ್ರಸ್ತಾಪವನ್ನು ಸರಕಾರ ಮಾಡಿದೆ. ಇದು ಕೊರಗ ಸಮುದಾಯಕ್ಕೆ ಸರಕಾರ ಮಾಡಿರುವ ಅನ್ಯಾಯ ಹಾಗೂ ಅಪಮಾನವಾಗಿದೆ ಎಂದು ಉಡುಪಿ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷೆ ಗೌರಿ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಕೊರಗ ಸಂಘದ ನೇತೃತ್ವದಲ್ಲಿ ಕೊರಗರ ವೈದ್ಯಕೀಯ ವೆಚ್ಚ ಮರು ಪಾವತಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಹಕ್ಕೊತ್ತಾಯ ಜಾಥಾ ಹಾಗೂ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.

ಪರಿಶಿಷ್ಟ ಪಂಗಡದ ನೈಜ ಬುಡಕಟ್ಟು ಸಮುದಾಯದ ಕೊರಗರು ಇಂದು ಅಳಿವಿನಂಚಿನಲ್ಲಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಈ ಸಮುದಾಯದ ಆರೋಗ್ಯ ಸುಧಾರಣೆಗಾಗಿ ಸರಕಾರ ವೈದ್ಯಕೀಯ ವೆಚ್ಚದ ಮರುಪಾವತಿಗೆ ಅನುದಾನ ಒದಗಿಸುತ್ತಿತ್ತು. ಆದರೆ ಈಗ ಅಧಿಕಾರಿಗಳು ಕೊರಗರು ಮದ್ಯಪಾನ ಮಾಡುವುದರಿಂದ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂಬ ಅರ್ಥದಲ್ಲಿ ಪ್ರಸ್ತಾವ ಸಲ್ಲಿಸಿ ಈ ಯೋಜನೆಯನ್ನು ಕೈಬಿಟ್ಟಿದ್ದಾರೆ. ಆದರೆ ಇದು ಸರಿಯಾದ ಮಾಹಿತಿ ಅಲ್ಲ. ಸರಕಾರ ಈವರೆಗೆ ಭರಿಸಿದ ವೆಚ್ಚದಲ್ಲಿ ಬಹುಪಾಲು ಕಾಯಿಲೆಗಳು ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳೇ ಆಗಿವೆ ಎಂದು ಅವರು ಮಾಹಿತಿ ನೀಡಿದರು.

ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಕೊರಗ ಸಮುದಾಯದಲ್ಲಿ ಕುಡುಕರ ಸಂಖ್ಯೆ ಜಾಸ್ತಿ ಇದೆ ಎಂದು ಸುಳ್ಳು ಆರೋಪ ಹೊರಿಸಿ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಅಧಿಕಾರಿಗಳಲ್ಲಿ ಯಾವುದೇ ಆಧಾರ ಇಲ್ಲ. ಇದು ಬಹಳ ಬಾಲಿಶವಾದ ನಿರ್ಧಾರವಾಗಿದೆ. ಸಂವಿಧಾನ ನೀಡಿರುವ ಸೌಲಭ್ಯವನ್ನು ಸರಕಾರ ಹಂತಹಂತವಾಗಿ ಇಲ್ಲವಾಗಿರುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.

ಉಡುಪಿ ಟೈಗಲ್ ಸರ್ಕಲ್‌ನಿಂದ ಆರಂಭಗೊಂಡ ಜಾಥಾವು ಸಿಂಡಿಕೆಟ್ ಸರ್ಕಲ್‌ಗೆ ತೆರಳಿ, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಕಾಯಿನ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಪ್ತಿಗೊಂಡಿತು. ಧರಣಿಯ ಬಳಿಕ ಜಿಲ್ಲಾಧಿಕಾರಿ ಮೂಲಕ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಕೊರಗ ಮುಖಂಡರಾದ ಗಣೇಶ್ ಕುಂದಾಪುರ, ಬಾಬು ಪಾಂಗಾಳ, ಗಣೇಶ್ ಬಾರಕೂರು, ಲಕ್ಷ್ಮಣ್ ಬೈಂದೂರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ ನಾಡ ಮೊದಲಾದವರು ಉಪಸ್ಥಿತರಿದ್ದರು.


ಈ ಹಿಂದೆ ಕೊರಗರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅದರ ವೈದ್ಯಕೀಯ ವೆಚ್ಚವನ್ನು ಸರಕಾರ ಒದಗಿಸುತ್ತಿತ್ತು. ಆದರೆ ಇನ್ನು ಮುಂದೆ ಅದನ್ನು ಕೊಡುವುದಿಲ್ಲ ಎಂಬುದಾಗಿ ಆದೇಶ ನೀಡಿದೆ. ಇದರಿಂದ ಮೊದಲೇ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದ ಕೊರಗರು, ಇನ್ನು ಮನೆಯಲ್ಲಿಯೇ ಸಾಯಲಿದ್ದಾರೆ. ಇದರಿಂದ ಕೊರಗ ಸಮುದಾಯ ಸಂಪೂರ್ಣವಾಗಿ ನಶಿಸಿ ಹೋಗುವ ವ್ಯವಸ್ಥೆ ಆಗುತ್ತದೆ. ಆದುದರಿಂದ ಸರಕಾರ ಈ ಆದೇಶವನ್ನು ಕೈಬಿಟ್ಟು ವೈದ್ಯಕೀಯ ವೆಚ್ಚವನ್ನು ನೀಡಬೇಕು.

-ಗಣೇಶ್ ಕುಂದಾಪುರ, ಕೊಗರ ಮುಖಂಡರು


ಮದ್ಯ ಮಾರಾಟದ ಆದಾಯದಿಂದಲೇ ಇಂದು ಸರಕಾರ ನಡೆಯುತ್ತಿದೆ. ಒಂದೆಡೆ ಸರಕಾರವೇ ಅಬಕಾರಿ ಇಲಾಖೆಗ ಗುರಿ ನೀಡಿ ಜನರಿಗೆ ಹೆಚ್ಚು ಹೆಚ್ಚು ಕುಡಿಸಿದರೆ, ಇನ್ನೊಂದೆಡೆ ಇದೇ ಕಾರಣ ನೀಡಿ ಜನಪರವಾದ ಯೋಜನೆಯನ್ನೇ ರದ್ದುಗೊಳಿಸುತ್ತಿದೆ. ಈ ಸಮುದಾಯ ಕುಡಿತಕ್ಕೆ ಒಳಗಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು, ಸರಕಾರವೇ ತಪ್ಪಿತಸ್ಥರು.

-ಡಾ.ಪಿ.ವಿ.ಭಂಡಾರಿ, ಮನೋವೈದ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News