ಸೋನಾಲಿ ಫೋಗಟ್ ಸಾವಿನ ಪ್ರಕರಣ ಸಿಬಿಐಗೆ ಹಸ್ತಾಂತರ:ಗೋವಾ ಸಿಎಂ

Update: 2022-09-12 15:18 GMT

ಪಣಜಿ,ಸೆ.12: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಕೊಲೆ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಸೋಮವಾರ ಇಲ್ಲಿ ತಿಳಿಸಿದರು.

ಫೋಗಟ್ ಆ.22-23ರ ರಾತ್ರಿ ಉತ್ತರ ಗೋವಾದ ಅಂಜುನಾದ ರೆಸ್ಟಾರಂಟ್‌ವೊಂದರಲ್ಲಿ ಪಾರ್ಟಿಯನ್ನು ಮುಗಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದರು. ಫೋಗಟ್‌ರ ಇಬ್ಬರು ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರು ಆಕೆಗೆ ಮಾದಕ ದ್ರವ್ಯ ಬೆರೆಸಿದ್ದ ಪಾನೀಯವನ್ನು ಕುಡಿಸಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿದ್ದವು. ಮಾದಕ ದ್ರವ್ಯ ಸೇವನೆಯ ಬಳಿಕ ಫೋಗಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ವಾನ್ ಮತ್ತು ಸಿಂಗ್ ಸೇರಿದಂತೆ ಐವರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.

ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ಬರೆಯಲು ರಾಜ್ಯ ಸರಕಾರವು ನಿರ್ಧರಿಸಿದೆ ಎಂದು ಸೋಮವಾರ ತಿಳಿಸಿದ ಸಾವಂತ್,‘ನಮ್ಮ ಪೊಲೀಸರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ,ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಜನರು ಮತ್ತು ಫೋಗಟ್ ಪುತ್ರಿ ಪದೇಪದೇ ಒತ್ತಾಯಿಸಿದ್ದಾರೆ ’ಎಂದರು.

ಫೋಗಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಸೆ.23ರೊಳಗೆ ಶಿಫಾರಸು ಮಾಡದಿದ್ದರೆ ಸಾಮೂಹಿಕ ಪ್ರತಿಭಟನೆಯನ್ನು ನಡೆಸುವುದಾಗಿ ಖಾಪ್ ಪಂಚಾಯತ್ ರವಿವಾರ ಹರ್ಯಾಣ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಫೋಗಟ್ ಅವರ ಪುತ್ರಿ ಯಶೋಧರಾ ಮತ್ತು ಕುಟುಂಬದ ಇತರ ಸದಸ್ಯರೂ ಮಹಾಪಂಚಾಯತ್‌ನಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News