ಪ್ರವಾಸೀ ವೀಸಾ ಅವಶ್ಯಕತೆ ಮನ್ನಾ ಮಾಡಲು ಜಪಾನ್ ನಿರ್ಧಾರ

Update: 2022-09-12 15:34 GMT

ಟೋಕಿಯೊ, ಸೆ.12: ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಗಡಿ ನಿಯಂತ್ರಣಗಳನ್ನು ಮತ್ತಷ್ಟು ಸರಾಗಗೊಳಿಸುವ ಭಾಗವಾಗಿ ಇನ್ನಷ್ಟು ದೇಶಗಳಿಗೆ ಪ್ರವಾಸೀ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಲು ಜಪಾನ್ ಸರಕಾರ ಯೋಜಿಸುತ್ತಿದೆ.

ಕೊರೋನಾ ಸೋಂಕಿಗೂ ಮುನ್ನ  68 ದೇಶಗಳು ಹಾಗೂ ಪ್ರದೇಶಗಳ ಪ್ರವಾಸಿಗರು ಜಪಾನ್ಗೆ ಭೇಟಿ ನೀಡಲು ವೀಸಾದ ಅಗತ್ಯವಿರಲಿಲ್ಲ. ಈ ಸೌಲಭ್ಯವನ್ನು ಇನ್ನಷ್ಟು ದೇಶಗಳಿಗೆ ವಿಸ್ತರಿಸಲು ಇದೀಗ ನಿರ್ಧರಿಸಲಾಗಿದೆ ಎಂದು ಫ್ಯುಜಿ ನ್ಯೂಸ್ ನೆಟ್ವರ್ಕ್ ಸೋಮವಾರ ವರದಿ ಮಾಡಿದೆ.

‌ಈ ಕುರಿತ ಪ್ರಸ್ತಾವನೆಗೆ ಜಪಾನ್ ಪ್ರಧಾನಿ ಫ್ಯುಮಿಯೊ ಕಿಷಿಡಾ ಈ ವಾರವೇ ಅನುಮೋದನೆ ನೀಡುವ ನಿರೀಕ್ಷೆಯಿದೆ. ಇದು ವೈಯಕ್ತಿಕ ಪ್ರವಾಸಿಗರಿಗೆ ಟ್ರಾವೆಲ್ ಏಜೆನ್ಸಿಯಲ್ಲಿ ಬುಕಿಂಗ್ ಮಾಡದೆಯೇ ಜಪಾನ್ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಿದೆ.

ಈ ಮಧ್ಯೆ, ಆಗಮನದ ಮೇಲಿನ ಮಿತಿಯನ್ನು ಅಕ್ಟೋಬರ್ ವೇಳೆಗೆ ಸರಕಾರ ರದ್ದುಗೊಳಿಸಬಹುದು ಎಂದು ನಿಕೆಯ್ ಪತ್ರಿಕೆ ವರದಿ ಮಾಡಿದೆ. ರವಿವಾರ ಟಿವಿ  ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪ ಪ್ರಧಾನ ಸಂಪುಟ ಕಾರ್ಯದರ್ಶಿ ಸೆಯ್ಜಿ ಕಿಹಾರ, ಪ್ರವಾಸಿಗರನ್ನು ಆಕರ್ಷಿಸಲು ದುರ್ಬಲ ಯೆನ್(ಜಪಾನ್ ಕರೆನ್ಸಿ) ಅತ್ಯಂತ ಪರಿಣಾಮಕಾರಿಯಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News