ಭಟ್ಕಳ: ಗ್ರಾಮೀಣ ವಿದ್ಯಾರ್ಥಿಯ ಸಾಧನೆ; ಪರಿಸರ ಸ್ನೇಹಿ ʼರೋಡ್ ಕ್ಲೀನರ್ʼ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2022-09-12 16:28 GMT

ಭಟ್ಕಳ: ತಾಲೂಕಿನ ಹೆಬಳೆ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಸಂದೇಶ ಅನಂತ ನಾಯ್ಕ ಸಿದ್ಧಪಡಿಸಿರುವ ರೋಡ್ ಕ್ಲೀನರ್ ಯಂತ್ರ, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ರಾಷ್ಟ್ರಮಟ್ಟದ ಇನ್ಸ್‌ಪಯರ್ಡ್‌ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಸೈಕಲ್ ಅಂಗಡಿಯಿಂದ ಪಡೆದ 2 ಚಕ್ರ, ಚೈನ್ ಮತ್ತು ಸಾಕೆಟ್, ಎಮ್.ಎಸ್ ಶೀಟ್, ಪೈಪ್, ಕಬ್ಬಿಣದ ಸರಳು, ರೋಲಿಂಗ್ ಬರ್, ಬೇರಿಂಗ್ ಇತ್ಯಾದಿಗಳನ್ನು ಬಳಸಿ ಅತಿ ಕಡಿಮೆ ಎಂದರೆ 3-4 ಸಾವಿರ ರೂ. ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದ್ದು, ಶಿಕ್ಷಕ ಹೇಮಾವತಿ ನಾಯ್ಕ ವಿದ್ಯಾರ್ಥಿ ಸಂದೇಶನಿಗೆ ಮಾರ್ಗದರ್ಶನ ನೀಡಿದ್ದಾರೆ. ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವ ಬಾಟಲಿ, ಪ್ಲಾಸ್ಟಿಕ್ ಕವರ್, ಕಸ ಕಡ್ಡಿಗಳನ್ನು ಈ ಯಂತ್ರದಿಂದ ಸುಲಭವಾಗಿ ವಿಲೇವಾರಿ ಮಾಡಲು ಸಾಧ್ಯವಿದ್ದು, ಬಳಸಬಹುದಾಗಿದೆ.

2020-2021ರಲ್ಲಿ ಕೋವಿಡ್ ಕಾರಣದಿಂದಾಗಿ ಆನ್‍ಲೈನ್‍ನಲ್ಲಿ ನಡೆದ ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಂದೇಶ ಸಿದ್ಧಪಡಿಸಿರುವ 3ರೋಡ್ ಕ್ಲೀನರ್ ಆಯ್ಕೆಯಾಗಿದ್ದು, ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಭಟ್ಕಳದ ಸಂದೇಶ ಸ್ಥಾನ ಪಡೆದಿದ್ದಾನೆ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ 1000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಂದೇಶ ಸಾಧನೆಯ ಬಗ್ಗೆ ಮಾಹಿತಿ ನೀಡಿದ, ಮಾರ್ಗದರ್ಶಿ ಶಿಕ್ಷಕಿ ಹೇಮಾವತಿ ನಾಯ್ಕ, ಈ ವಿದ್ಯಾರ್ಥಿ ಸರ್ಪನಕಟ್ಟೆಯಿಂದ ನಿತ್ಯವೂ ಶಾಲೆಗೆ ಬರುತ್ತಿದ್ದು, ರಸ್ತೆಯ ಬದಿಯಲ್ಲಿ ಕಾಣುವ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಈ ಯಂತ್ರ ಸಿದ್ಧಪಡಿಸಲು ಮುಂದಾಗಿದ್ದಾನೆ. ಆತನಿಗೆ ಮುಂದೆ ಯಶಸ್ಸು ಸಿಗಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಈ ಸಂದರ್ಭ ಸಿಆರ್‍ಪಿ ಕೃಷ್ಣ ಪಟಗಾರ, ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ನಾಯ್ಕ, ಶಿಕ್ಷಕಿ ಶ್ವೇತಾ ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ ನಾಯ್ಕ, ಊರ ಪ್ರಮುಖ ಭವಾನಿ ಶಂಕರ ನಾಯ್ಕ, ಬಿಆರ್‍ಸಿ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಡಿಆರ್‍ಪಿ ಬಿ.ಕೆ.ನಾಯ್ಕ, ಶಿಕ್ಷಕ ಆನಂದ ನಾಯ್ಕ, ಸಹ ಶಿಕ್ಷಕಿ ಸಂಧ್ಯಾ ಶ್ಯಾನುಭಾಗ, ಅಪರ್ಣಾ ಶೆಟ್ಟಿ, ಪ್ರೇಮಾ ನಾಯ್ಕ, ಮುಬಿನಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News