ಇಸ್ರೇಲ್ ಒತ್ತಡಕ್ಕೆ ಮಣಿಯಬೇಡಿ: ವಿಶ್ವಸಂಸ್ಥೆಗೆ ಇರಾನ್ ಆಗ್ರಹ

Update: 2022-09-12 16:47 GMT

ಟೆಹ್ರಾನ್, ಸೆ.12: ವಿಶ್ವಸಂಸ್ಥೆಯ ಪರಮಾಣು ನಿಗಾ ವಿಭಾಗ(ಐಎಇಎ)ದೊಂದಿಗೆ ಸಹಕಾರ ಮುಂದುವರಿಸಲು ಇರಾನ್ ಸಿದ್ಧ ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ನಾಸಿರ್ ಕನ್ನಾನಿ ಹೇಳಿದ್ದು, ಇರಾನ್ ನ ಪರಮಾಣು ಚಟುವಟಿಕೆಯ ಬಗ್ಗೆ ಇಸ್ರೇಲ್ ನ ಒತ್ತಡಕ್ಕೆ ಐಎಇಎ ಮಣಿಯಬಾರದು ಎಂದು ಆಗ್ರಹಿಸಿದ್ದಾರೆ.

ಇರಾನ್ ನ 3 ಸ್ಥಳಗಳಲ್ಲಿ ಯುರೇನಿಯಂ ಕುರುಹುಗಳ ಬಗ್ಗೆ ಐಎಇಎ ತನಿಖೆಗಳಿಗೆ ವಿಶ್ವಾಸಾರ್ಹ ಉತ್ತರವನ್ನು ನೀಡುವಂತೆ ಇರಾನ್ ಅನ್ನು ಒತ್ತಾಯಿಸುವ ನಿರ್ಣಯವನ್ನು ಮಂಡಿಸಿದ 3 ತಿಂಗಳ ಬಳಿಕ ಐಎಇಎ ಆಡಳಿತ ಮಂಡಳಿ ಸೋಮವಾರ ಸಭೆ ಸೇರಿದೆ. ಆದರೆ ಈ ತನಿಖಾ ವರದಿ ರಾಜಕೀಯ ಪ್ರೇರಿತ ಎಂದು ಇರಾನ್ ತಿರಸ್ಕರಿಸಿದೆ. ಏಜೆನ್ಸಿಯೊಂದಿಗೆ ರಚನಾತ್ಮಕ ಸಹಕಾರಕ್ಕೆ ಇರಾನ್ ಬದ್ಥತೆಯನ್ನು ಘೋಷಿಸುತ್ತದೆ.

ಇರಾನ್ ಗೆ ಬದ್ಧತೆ ಇರುವಂತೆಯೇ ಹಕ್ಕುಗಳೂ ಇವೆ. ಐಎಇಎ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ಸುದ್ಧಿಗೋಷ್ಟಿಯಲ್ಲಿ ಕನ್ನಾನಿ ಹೇಳಿದ್ದಾರೆ. ಪರಮಾಣು ಒಪ್ಪಂದದ ಮರುಸ್ಥಾಪನೆಯ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ಮಧ್ಯೆ 16 ತಿಂಗಳು ನಡೆದ ಪರೋಕ್ಷ ಮಾತುಕತೆಯ ಬಳಿಕ ಗಮನಾರ್ಹ ಪ್ರಗತಿ ಸಾಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಒಪ್ಪಂದ ಮರುಸ್ಥಾಪನೆಗೆ  ಇರಾನ್ ಮುಂದಿರಿಸಿದ್ದ ಷರತ್ತು(ಐಎಇಎ ತನಿಖೆಯ ವರದಿಯನ್ನು ಮುಚ್ಚಿಬಿಡುವುದು) ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಹೇಳಿವೆ.

ಮಧ್ಯಪ್ರಾಚ್ಯದ ಏಕೈಕ ಪರಮಾಣು ಶಕ್ತ ದೇಶ ಎಂದು ಹೇಳಲಾಗಿರುವ ಇಸ್ರೇಲ್, ಇರಾನ್ಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಯಾವತ್ತೂ ಅವಕಾಶ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದೆ. ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವಾಗ ಯೆಹೂದಿ ಆಡಳಿತ(ಇಸ್ರೇಲ್)ದ ಹಿತಾಸಕ್ತಿಗೆ ಆದ್ಯತೆ ನೀಡುವುದಿಲ್ಲ ಎಂದು ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ದೃಢಪಡಿಸಬೇಕಿದೆ ಎಂದು ನಾಸಿರ್ ಕನ್ನಾನಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News