ಮೂರು ತಿಂಗಳ ಇಳಿಕೆಯ ಬಳಿಕ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಶೇ.7ಕ್ಕೆ ಏರಿಕೆ

Update: 2022-09-13 07:16 GMT

ಹೊಸದಿಲ್ಲಿ,ಸೆ.12: ಕಳೆದ ಮೂರು ತಿಂಗಳುಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿಲ್ಲರೆ ಹಣದುಬ್ಬರವು ಹೆಚ್ಚುತ್ತಿರುವ ಆಹಾರ ವೆಚ್ಚಗಳಿಂದಾಗಿ ಆಗಸ್ಟ್‌ನಲ್ಲಿ ಮತ್ತೆ ಶೇ.7ಕ್ಕೇರಿದೆ. ಇದು ಆರ್‌ಬಿಐ ಮೇಲೆ ಬೆಲೆಯೇರಿಕೆಯನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಏರಿಸುವ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.

ಹಣದುಬ್ಬರವನ್ನು ಶೇ.2ರಿಂದ ಶೇ.6ರ ನಡುವೆ ಕಾಯ್ದುಕೊಳ್ಳುವುದು ಆರ್‌ಬಿಐ ಗುರಿಯಾಗಿದ್ದರೂ,ಈ ವರ್ಷದ ಪ್ರತಿಯೊಂದೂ ತಿಂಗಳಿನಲ್ಲಿ ಹಣದುಬ್ಬರವು ಈ ಮಿತಿಗಿಂತ ಮೇಲೆಯೇ ಇದೆ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯು ಸೋಮವಾರ ಬಿಡುಗಡೆಗೊಳಿಸಿರುವ ಮಾಹಿತಿಯಂತೆ ಆಗಸ್ಟ್‌ನಲ್ಲಿ ಆಹಾರ ಹಣದುಬ್ಬರವು ಶೇ.7.62ಕ್ಕೇರಿದೆ. ಇದು ಜುಲೈನಲ್ಲಿ ಶೇ.6.69 ಮತ್ತು 2021,ಆಗಸ್ಟ್‌ನಲ್ಲಿ ಶೇ.3.11ರಷ್ಟಿತ್ತು. ದೇಶಾದ್ಯಂತ ಅನಿಯಮಿತ ಮಳೆಯಿಂದಾಗಿ ಬೆಳೆಗಳಿಗೆ ಹೆಚ್ಚಿನ ಹಾನಿಯುಂಟಾಗಿದ್ದು,ಮುಂಬರುವ ತಿಂಗಳುಗಳಲ್ಲಿ ಆಹಾರ ಸಾಮಗ್ರಿಗಳ ಬೆಲೆಗಳು ಅಧಿಕ ಮಟ್ಟದಲ್ಲಿಯೇ ಇರಲಿವೆ ಎಂಬ ಸುಳಿವನ್ನು ನೀಡಿದೆ.

ಇತ್ತೀಚಿನ ವಾರಗಳಲ್ಲಿ ಕಚ್ಚಾತೈಲ ಬೆಲೆಗಳು ಗಣನೀಯವಾಗಿ ಇಳಿಕೆಯಾಗಿದ್ದರೂ ಇಂಧನ ಹಣದುಬ್ಬರವು ಶೇ.10.8ಕ್ಕೆ ಏರಿಕೆಯಾಗಿದೆ.

ಹಣದುಬ್ಬರವು 2023ರ ಆರಂಭದ ಭಾಗದವರೆಗೂ ಶೇ.6ರ ಮಿತಿಯ ಮೇಲೆಯೇ ಇರಲಿದೆ ಎನ್ನುವುದನ್ನು ಆರ್‌ಬಿಐ ಮುನ್ನಂದಾಜುಗಳು ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News