ಗಣಿ ಮಾಫಿಯಾದಿಂದ ಕಪ್ಪತಗುಡ್ಡವನ್ನು ಕಾಪಾಡಿ

Update: 2022-09-13 04:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯ ಶಕೆ ಆರಂಭವಾದ ನಂತರ ನೈಸರ್ಗಿಕ ಸಂಪತ್ತನ್ನು ದೋಚುವುದೇ ಅಭಿವೃದ್ಧಿ ಎನ್ನುವ ಹೊಸ ವ್ಯಾಖ್ಯಾನ ಹುಟ್ಟಿಕೊಂಡಿದೆ. ಮುಂದಿನ ನೂರಾರು ತಲೆಮಾರುಗಳಿಗೂ ಸೇರಿದ ಇಳೆಯ ಸಂಪನ್ಮೂಲಗಳನ್ನು ಈ ಕಾಲದಲ್ಲೇ ಲೂಟಿ ಮಾಡಿ ಕೋಟಿ, ಕೋಟಿ ರೂ. ಕೊಳ್ಳೆ ಹೊಡೆಯುವುದು ಈಗ ಸಾಮಾನ್ಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಲೂಟಿಕೋರರ ಕಣ್ಣು ಈಗ ಗದಗ ಜಿಲ್ಲೆಯ ಜೀವ ವೈವಿಧ್ಯದ ತಾಣವಾದ ಕಪ್ಪತಗುಡ್ಡದ ಮೇಲೆ ಬಿದ್ದಿದೆ. ಈ ಕಪ್ಪತಗುಡ್ಡದ ಒಡಲ ಗರ್ಭದಲ್ಲಿ ಅಪಾರವಾದ ಖನಿಜ ಸಂಪತ್ತಿದೆ. ಅದರ ಮೇಲ್ಮಣ್ಣಿನಲ್ಲಿ ಇದಕ್ಕಿಂತ ಅಪರೂಪವಾದ ಸಸ್ಯ ಸಂಪತ್ತಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕೂಡ ಇದು ಮುಖ್ಯವಾದ ಕಣ್ಮನ ಸೆಳೆಯುವ ತಾಣ. ಇದನ್ನೆಲ್ಲಾ ದೋಚಲು ಗಣಿ ಲೂಟಿಕೋರರು ಈಗ ಮತ್ತೆ ಮಸಲತ್ತು ನಡೆಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಗಣಿ ಲೂಟಿಕೋರರು ಬಳ್ಳಾರಿಯ ಅಮೂಲ್ಯವಾದ ಖನಿಜ ಸಂಪತ್ತನ್ನು ದೋಚಿ ಲಕ್ಷಾಂತರ ಕೋಟಿ ರೂ. ಬಾಚಿಕೊಂಡರು. ಬಳ್ಳಾರಿಯಲ್ಲಿ ಪ್ರತಿ ಸರಕಾರವನ್ನೇ ನಿರ್ಮಿಸಿಕೊಂಡಿದ್ದರು. ಈಗ ಇಂತಹ ದಗಾಕೋರರು ಕಪ್ಪತಗುಡ್ಡದ ಒಡಲ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಲೆ ಬೀಸಿದ್ದಾರೆ. ಹಿಂದೆ ಇಲ್ಲಿ ಗಣಿಗಾರಿಕೆ ನಡೆಸಲು ಹುನ್ನಾರ ನಡೆದಾಗ ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಈ ಭಾಗದ ಜನರ, ರೈತ, ಕಾರ್ಮಿಕರ ಬಹು ದೊಡ್ಡ ಪ್ರತಿರೋಧ ಬಂದುದರಿಂದ ಅಂದಿನ ಸರಕಾರ ಹಿಂದೆ ಸರಿದಿತ್ತು. ಜನತೆಯ ಒತ್ತಡಕ್ಕೆ ಮಣಿದ ಸರಕಾರ ಕಪ್ಪತಗುಡ್ಡ ಪ್ರದೇಶವನ್ನು ವನ್ಯಜೀವಿಧಾಮ ಎಂದು ಘೋಷಿಸಿತು. ಅಧಿನಿಯಮಗಳ ಪ್ರಕಾರ ವನ್ಯಧಾಮ ಸುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮಪ್ರದೇಶವೆಂದು ಪರಿಗಣಿಸಲಾಗುತ್ತದೆ.

ಆದರೆ ಕಪ್ಪತಗುಡ್ಡದ ಒಡಲಲ್ಲಿ ಇರುವ ಸಂಪತ್ತಿನ ಮೇಲೆ ಕಣ್ಣು ಹಾಕಿರುವ ದಗಾಕೋರರು ಅದಕ್ಕಿರುವ ಶಾಸನದ ರಕ್ಷಣೆಯನ್ನು ವಾಪಸ್ ಪಡೆದು ಅಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಒತ್ತಡ ತರುತ್ತಿದ್ದಾರೆ. ಯಡಿಯೂರಪ್ಪನವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಮತ್ತು ಅದಕ್ಕಿಂತ ಮುಂಚೆ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಡ ಬಂದಿತ್ತು. ಆದರೆ ಅದಕ್ಕೆ ಅವರಿಬ್ಬರೂ ಮಣಿದಿರಲಿಲ್ಲ. ಸರಕಾರ ಈ ದೃಢ ನಿರ್ಧಾರ ತಾಳಲು ಗದಗ ಭಾಗದ ಜನತೆ ನಡೆಸಿದ ಹೋರಾಟ ಮತ್ತು ಅವರಿಗೆ ಒತ್ತಾಸೆಯಾಗಿ ನಿಂತ ಅಲ್ಲಿನ ಅರಣ್ಯಾಧಿಕಾರಿಗಳು ಕಾರಣ ಎಂದರೆ ತಪ್ಪಲ್ಲ.

ಕಪ್ಪತಗುಡ್ಡದಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂದು ಕಳೆದ ಶತಮಾನದ ಆರಂಭದಲ್ಲಿ ಅಲ್ಲಿರಬಹುದಾದ ಚಿನ್ನಕ್ಕಾಗಿ ಜಾನ್ ಟೇಲರ್ ಗಣಿ ಕಂಪೆನಿ ಹತ್ತಾರು ವರ್ಷಗಳ ಕಾಲ ನೆಲವನ್ನು ಅಗೆದರೂ ಪ್ರಯೋಜನವಾಗದೆ ಹಿಂದೆ ಸರಿದಿತ್ತು. ಆದರೂ ಅಲ್ಪ ಪ್ರಮಾಣದ ಚಿನ್ನದ ನಿಕ್ಷೇಪಗಳು ಅಲ್ಲಿವೆ ಎಂದೂ, ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ದೋಚಬಹುದೆಂದೂ ಗಣಿ ಮಾಫಿಯಾದಿಂದ ಮಸಲತ್ತು ನಡೆಯುತ್ತಲೇ ಇದೆ.

ಈಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಗಣಿ ಮಾಫಿಯಾ ಮತ್ತೆ ಕಪ್ಪತಗುಡ್ಡದ ಮೇಲೆ ಕಣ್ಣು ಹಾಕಿದೆ. ಈ ಬಾರಿ ಅದು ಹೊಸ ತಂತ್ರ ರೂಪಿಸಿದೆ. ಸದರಿ ವನ್ಯಧಾಮದ ಸುತ್ತಲಿನ ಘೋಷಿತ ಹತ್ತು ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕುಗ್ಗಿಸಿ ಕೇವಲ ಒಂದು ಕಿ.ಮೀ.ಗೆ ಇಳಿಸಬೇಕೆಂದು ಕೆಲವು ಗಣಿ ಮಾಫಿಯಾದ ಫಲಾನುಭವಿಗಳು, ಕಲ್ಲು ಗಣಿ ಗುತ್ತಿಗೆದಾರರು ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ.

ವನ್ಯಜೀವಿಧಾಮ ಎಂದು ಕಪ್ಪತಗುಡ್ಡ ಪ್ರದೇಶವನ್ನು ಘೋಷಿಸಿದ್ದರೂ ಪರಿಸರ ಸೂಕ್ಷ್ಮಪ್ರದೇಶದ ವ್ಯಾಪ್ತಿಯನ್ನು ಕುಗ್ಗಿಸಲು ಒತ್ತಡ ಬರುತ್ತಿದೆ. ಇದೇನು ಅಂತಹ ಕಟ್ಟುನಿಟ್ಟಿನ ನಿಯಮವಲ್ಲ. ಅನೇಕ ಕಡೆ ಒತ್ತಡಕ್ಕೆ ಮಣಿದ ಉದಾಹರಣೆಗಳೂ ಇವೆ. ಬೆಂಗಳೂರು ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಲಿನ ಪ್ರದೇಶದಲ್ಲಿ ಅಲ್ಲಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿತಗೊಳಿಸಲಾಗಿದೆ. ಮುಂಬೈ ಮಹಾನಗರದಲ್ಲಿರುವ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ಚೆನ್ನೈನಲ್ಲಿ ಇರುವ ಗಿಂಡಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ಕಿರಿದುಗೊಳಿಸಲಾಗಿದೆ.

ಯಾವುದೇ ಸೂಕ್ಷ್ಮಪ್ರದೇಶದಲ್ಲಿ ಅದರ ವ್ಯಾಪ್ತಿ ಎಷ್ಟಿರಬೇಕೆಂಬುದರ ಬಗ್ಗೆ ಸ್ಥಳೀಯ ಜನರು, ಗ್ರಾಮ ಪಂಚಾಯತ್ ಪದಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕು. ಸಂಬಂಧಿಸಿದ ಪ್ರದೇಶದ ಜನರನ್ನು ಕತ್ತಲಲ್ಲಿ ಇಟ್ಟು ಉನ್ನತ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ.

ಯಾವುದೇ ಸರಕಾರ ಗಣಿ ಮಾಫಿಯಾದ ಒತ್ತಡಕ್ಕೆ ಮಣಿದು ಪರಿಸರ ಮಾರಕ ನಿರ್ಧಾರ ಕೈಗೊಂಡರೆ ಸ್ಥಳೀಯ ಜನ ಅದನ್ನು ಒಪ್ಪಬಾರದು. ಸಮುದಾಯದ ಪ್ರತಿರೋಧದಿಂದ ಮಾತ್ರ ನಮ್ಮ ಪರಿಸರ ಸೂಕ್ಷ್ಮಪ್ರದೇಶಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಜನಪರ ಮತ್ತು ಪರಿಸರ ಕಾಳಜಿಯ ಸಂಘ ಸಂಸ್ಥೆಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಮುಂದಾಗಬೇಕು.ಮುಂದಿನ ನೂರಾರು ವರ್ಷಗಳ ಕಾಲ ಹಲವಾರು ತಲೆಮಾರುಗಳಿಗೆ ಪ್ರಯೋಜನವಾಗಬಲ್ಲ ಸಂಪತ್ತು ನಮ್ಮ ಕಾಲದಲ್ಲೇ ಎಲ್ಲವನ್ನೂ ನುಂಗಿ ನೀರು ಕುಡಿಯುವುದಕ್ಕೆ ಅವಕಾಶ ನೀಡಬಾರದು.

ಅಭಿವೃದ್ಧಿ ಅಂದರೆ ಗಣಿಗಾರಿಕೆ ಮಾತ್ರವಲ್ಲ, ಕಪ್ಪತಗುಡ್ಡದಂಥ ರಮ್ಯ ನಿಸರ್ಗ ತಾಣಗಳನ್ನು ಪ್ರವಾಸೋದ್ಯಮದ ಆಕರ್ಷಕ ಕೇಂದ್ರಗಳನ್ನಾಗಿ ಮಾಡಬಹುದು. ಇದಕ್ಕೆ ಸರಕಾರದ ಇಚ್ಛಾಶಕ್ತಿ ಬೇಕು. ಗದಗ ಸುತ್ತಮುತ್ತಲಿನ ನೂರು ಕಿ.ಮೀ. ಪ್ರದೇಶದಲ್ಲಿ ಹಂಪಿ, ಬಾದಾಮಿ, ಐಹೊಳೆ, ವಿಜಯಪುರ, ಪಟ್ಟದಕಲ್ಲು, ಕೂಡಲ ಸಂಗಮ ಮುಂತಾದ ಪ್ರವಾಸಿ ತಾಣಗಳಿವೆ.

ತಂಗಾಳಿ ಬೀಸುವ ಜೀವ ವೈವಿಧ್ಯದ ಕಪ್ಪತಗುಡ್ಡವನ್ನು ಕೂಡ ವನ್ಯ ಜೀವಿಧಾಮವನ್ನಾಗಿ ಉಳಿಸಿಕೊಂಡು ಅಭಿವೃದ್ಧಿ ಪಡಿಸಿದರೆ ಸಾಕಷ್ಟು ಸಂಪನ್ಮೂಲ ಕ್ರೋಡೀಕರಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸಲಿ. ಈ ಕುರಿತು ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ಧರ್ಮಗುರು ಗಳು ಸರಕಾರದ ಮೇಲೆ ಒತ್ತಡ ತಂದು ಕಪ್ಪತ ಗುಡ್ಡವನ್ನು ಉಳಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News