ಸೌದಿ ಅರೇಬಿಯ: ಎಲಿಝಬೆತ್ ರಾಣಿಗಾಗಿ ಉಮ್ರಾ ಯಾತ್ರೆ ಮಾಡಿದ್ದೇನೆ ಎಂದ ವ್ಯಕ್ತಿಯ ಬಂಧನ
ರಿಯಾದ್, ಸೆ.13: ಬ್ರಿಟನ್ ನ ದಿವಂಗತ ರಾಣಿ ಎಲಿಝಬೆತ್ ಪರವಾಗಿ ಉಮ್ರಾ ಯಾತ್ರೆ ಮಾಡಲು ಮುಸ್ಲಿಮರ ಪವಿತ್ರ ನಗರ ಮಕ್ಕಾಕ್ಕೆ ಪ್ರಯಾಣಿಸಿರುವುದಾಗಿ ಹೇಳಿಕೊಂಡ ವ್ಯಕ್ತಿಯನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ.
ಯೆಮನ್ ಪ್ರಜೆಯೊಬ್ಬ ತಾನು ಮಕ್ಕಾದ ಗ್ರಾಂಡ್ ಮಸೀದಿಯಲ್ಲಿ ಇರುವ ವೀಡಿಯೊವನ್ನು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ. ಇಲ್ಲಿ ಮುಸ್ಲಿಮೇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ರಾಣಿ ಎಲಿಝಬೆತ್ ಅವರ ಸದ್ಗತಿಗಾಗಿ ಉಮ್ರಾ ಯಾತ್ರೆ. ಅವರನ್ನು ನೀತಿವಂತರಲ್ಲಿ ಒಬ್ಬರಾಗಿ ಸ್ವರ್ಗದಲ್ಲಿ ಸ್ವೀಕರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬ ಬರಹವಿದ್ದ ಬ್ಯಾನರ್ ಅನ್ನು ಆತ ಹಿಡಿದಿದ್ದ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಆತನನ್ನು ಬಂಧಿಸುವಂತೆ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಮಕ್ಕಾ ಯಾತ್ರಿಗಳು ಬ್ಯಾನರ್ ಹಿಡಿಯುವುದು ಅಥವಾ ಘೋಷಣೆ ಕೂಗುವುದನ್ನು ಸೌದಿ ಅರೆಬಿಯಾ ನಿಷೇಧಿಸಿದೆ. ಅಲ್ಲದೆ, ಮೃತಪಟ್ಟ ಮುಸ್ಲಿಮರ ಪರವಾಗಿ ಉಮ್ರಾ ಯಾತ್ರೆ ಮಾಡಲು ಅವಕಾಶವಿದೆ, ಆದರೆ ಮುಸ್ಲಿಮೇತರರ ಪರವಾಗಿ ಹೀಗೆ ಮಾಡಲು ಅವಕಾಶವಿಲ್ಲ.
ಗ್ರಾಂಡ್ ಮಸೀದಿಯೊಳಗೆ ಬ್ಯಾನರ್ ಹಿಡಿದುಕೊಂಡು ಉಮ್ರಾದ ಸೂಚನೆ ಮತ್ತು ನಿಯಮವನ್ನು ಉಲ್ಲಂಘಿಸಿದ ಯೆಮನ್ ಪ್ರಜೆಯನ್ನು ಮಸೀದಿಯ ಭದ್ರತಾ ಪಡೆ ಬಂಧಿಸಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.