×
Ad

ಬಿಜೆಪಿ ಶಾಸಕರನ್ನು ಖರೀದಿಸುತ್ತದೆ, ರೈತರ ಬೆಳೆಯನ್ನಲ್ಲ: ವಿಧಾನಸಭೆ ಹೊರಗೆ ಬೆಳ್ಳುಳ್ಳಿ ರಾಶಿ ಹಾಕಿದ ಕಾಂಗ್ರೆಸ್ ಶಾಸಕ

Update: 2022-09-13 21:42 IST

ಭೋಪಾಲ,ಸೆ.13: ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಗಳು ದೊರೆಯುತ್ತಿಲ್ಲ, ರಾಜ್ಯದ ಬಿಜೆಪಿ ಸರಕಾರವು ಅವರ ಬಗ್ಗೆ ನಿರಾಸಕ್ತಿಯನ್ನು ಹೊಂದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಮಳೆಗಾಲದ ಅಧಿವೇಶನದ ಮೊದಲ ದಿನವಾದ ಮಂಗಳವಾರ ಮಧ್ಯಪ್ರದೇಶ ವಿಧಾನಸಭೆಯ ಪ್ರವೇಶದ್ವಾರದಲ್ಲಿ ಲೋಡ್ಗಟ್ಟಲೆ ಬೆಳ್ಳುಳ್ಳಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಭುಜಗಳ ಮೇಲೆ ಬೆಳ್ಳುಳ್ಳಿ ಮೂಟೆಗಳನ್ನು ಹೊತ್ತು ತಂದಿದ್ದ ಶಾಸಕರನ್ನು ಪ್ರವೇಶದ್ವಾರದಲ್ಲಿ ತಡೆದಾಗ ಅವರು ಅಲ್ಲಿಯೇ ಮೂಟೆಗಳನ್ನು ಸುರಿದು ಪ್ರತಿಭಟನೆ ನಡೆಸಿದರು. ಸರಕಾರವು ನ್ಯಾಯಯುತ ಬೆಲೆಗಳಲ್ಲಿ ರೈತರಿಂದ ಬೆಳ್ಳುಳ್ಳಿಯನ್ನು ಖರೀದಿಸಬೇಕು ಎಂದು ಪ್ರತಿಭಟನಾನಿರತ ನಾಯಕರು ಹೇಳಿದರು.

ಆಡಳಿತ ಬಿಜೆಪಿಯು ಶಾಸಕರನ್ನು ಖರೀದಿಸಿದೆ,ಆದರೆ ರೈತರ ಬಗ್ಗೆ ನಿರಾಸಕ್ತಿಯನ್ನು ಹೊಂದಿದೆ. ರೈತರು ಬೆಳೆದ ಬೆಳ್ಳುಳ್ಳಿಯನ್ನು ಖರೀದಿಸಲು ಅದರ ಬಳಿ ಹಣವಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು. ತಮ್ಮ ಬೆಳೆಗೆ ಕಡಿಮೆ ಬೆಲೆಗಳು ದೊರೆಯುತ್ತಿರುವುದರಿಂದ ಹತಾಶ ರೈತರು ಬೆಳ್ಳುಳ್ಳಿ ಮೂಟೆಗಳನ್ನು ರಾಜ್ಯದ ರಸ್ತೆಗಳಲ್ಲಿ, ನದಿಗಳಲ್ಲಿ ಮತ್ತು ಚರಂಡಿಗಳಿಗೆ ಎಸೆಯುತ್ತಿರುವುದನ್ನು ಕಳೆದ ಕೆಲವು ದಿನಗಳಲ್ಲಿ ವೀಡಿಯೊಗಳು ತೋರಿಸಿವೆ.

ತಮಗೆ ಒಂದು ಕೆ.ಜಿ.ಬೆಳ್ಳುಳ್ಳಿಗೆ ಕೇವಲ ಒಂದು ರೂಪಾಯಿ ನೀಡಲಾಗುತ್ತಿದೆ ಎಂದು ರೈತರೋರ್ವರು ಅಳಲು ತೋಡಿಕೊಂಡಿದ್ದರು. ಬೆಳ್ಳುಳ್ಳಿ ಬೆಳೆಯಲು ತಾವು ಮಾಡಿದ್ದ ವೆಚ್ಚವನ್ನೂ ಪಡೆಯಲೂ ರೈತರಿಗೆ ಸಾಧ್ಯವಾಗುತ್ತಿಲ್ಲ. ಕೆ.ಜಿ.ಗೆ ಒಂದು ರೂ.ದರದಲ್ಲಿ ಮಾರಾಟ ಮಾಡುವುದು ಅವರಿಗೆ ಅನಿವಾರ್ಯವಾಗಿದೆ. ಅವರು ಪ್ರತಿಭಟನೆಯಾಗಿ ಬೆಳೆಯನ್ನು ನದಿಗಳಲ್ಲಿ ಮತ್ತು ಮಂಡಿಗಳಲ್ಲಿ ಸುರಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಚಿನ ಯಾದವ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News