ಪರಮಾಣು ಅಸ್ತ್ರ ಬಳಸಿದರೆ ಉತ್ತರ ಕೊರಿಯಾ ಸ್ವಯಂ ನಾಶವಾಗಲಿದೆ: ದ. ಕೊರಿಯಾ ಎಚ್ಚರಿಕೆ

Update: 2022-09-13 16:55 GMT

ಸಿಯೋಲ್, ಸೆ.13: ಉತ್ತರ ಕೊರಿಯಾವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಅದು ಆ ದೇಶವನ್ನು ಸ್ವಯಂ ವಿನಾಶದ ದಾರಿಯಲ್ಲಿ ಇರಿಸಲಿದೆ  ಎಂದು ದಕ್ಷಿಣ ಕೊರಿಯಾ ಮಂಗಳವಾರ ಎಚ್ಚರಿಸಿದೆ.

ಉತ್ತರ ಕೊರಿಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಪೂರ್ವಭಾವಿಯಾಗಿ ಅನುಮತಿ ನೀಡುವ ಹೊಸ ಕಾನೂನನ್ನು ಜಾರಿಗೊಳಿಸಿದ ಕೆಲ ದಿನಗಳ ಬಳಿಕ ದಕ್ಷಿಣ ಕೊರಿಯಾದಿಂದ ಈ ಕಠಿಣ ಎಚ್ಚರಿಕೆ ರವಾನೆಯಾಗಿದೆ.

ಈ ಹೊಸ ಕಾನೂನು ಜಾಗತಿಕ ರಂಗದಲ್ಲಿ ಉತ್ತರ ಕೊರಿಯಾದ ಒಂಟಿತನವನ್ನು ಇನ್ನಷ್ಟು ಆಳಗೊಳಿಸುವುದಷ್ಟೇ ಅಲ್ಲ, ಅಮೆರಿಕ ಮತ್ತು ದಕ್ಷಿಣ ಕೊರಿಯಾ ತಮ್ಮ ನಿರೋಧಕ ಮತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು ಪ್ರೇರೇಪಿಸುತ್ತದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಇಲಾಖೆ ಹೇಳಿದೆ.

ಉತ್ತರ ಕೊರಿಯಾ ತನ್ನ ಪರಮಾಣು ಅಸ್ತ್ರಗಳನ್ನು ಬಳಸದಂತೆ ತಡೆಯಲು ದಕ್ಷಿಣ ಕೊರಿಯಾ ತ್ವರಿತವಾಗಿ ತನ್ನ ಪೂರ್ವಭಾವಿ ದಾಳಿ ಸಾಮರ್ಥ್ಯ, ಕ್ಷಿಪಣಿ ರಕ್ಷಣಾ ಮತ್ತು ಬೃಹತ್ ಪ್ರತೀಕಾರ ಸಾಮರ್ಥ್ಯವನ್ನು ವರ್ಧಿಸಲಿದೆ ಮತ್ತು ಅಮೆರಿಕವು ತನ್ನ ಮಿತ್ರದೇಶ ದಕ್ಷಿಣ ಕೊರಿಯಾಕ್ಕೆ ಪರಮಾಣು ಸೇರಿದಂತೆ ಲಭ್ಯವಿರುವ ಎಲ್ಲಾ ಸಾಮರ್ಥ್ಯಗಳನ್ನು ಒದಗಿಸುವ ಬದ್ಧತೆಯನ್ನು ನಿರೀಕ್ಷಿಸುತ್ತೇವೆ ಎಂದು ಇಲಾಖೆ ಹೇಳಿದೆ.

ಒಂದು ವೇಳೆ ಉತ್ತರ ಕೊರಿಯಾ ಪರಮಾಣು ಬಳಸಲು ಯತ್ನಿಸಿದರೆ ಅಮೆರಿಕ-ದಕ್ಷಿಣ ಕೊರಿಯಾ ಮಿಲಿಟರಿ ಮೈತ್ರಿಯಿಂದ ಭಾರೀ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಮತ್ತು ಆ ದೇಶ ಸ್ವಯಂ ವಿನಾಶದ ದಾರಿಯಲ್ಲಿ ಸಾಗಲಿದೆ ಎಂದು ರಕ್ಷಣಾ ಇಲಾಖೆಯ ಪ್ರಬಾರೀ ವಕ್ತಾರ ಮೂನ್‌ಹಾಂಗ್ ಸಿಕ್ ಹೇಳಿದ್ದಾರೆ. ಮೇ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಯೂನ್‌ಸುಕ್ ಯಿಯೋಲ್ ನೇತೃತ್ವದ ದಕ್ಷಿಣ ಕೊರಿಯಾದ ಹೊಸ ಸಂಪ್ರದಾಯವಾದಿ ಸರಕಾರವು ಉತ್ತರ ಕೊರಿಯಾದ ಪ್ರಚೋದನೆಯ ಬಗ್ಗೆ ಕಠಿಣ ನಿಲುವು ತಳೆಯುವುದಾಗಿ ಸ್ಪಷ್ಟ ಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News