ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ರಶ್ಯ ನಿಯೋಗಕ್ಕೆ ವೀಸಾ

Update: 2022-09-13 16:57 GMT

ಮಾಸ್ಕೋ, ಸೆ.13: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹಾಗೂ ರಶ್ಯ ನಿಯೋಗದ ಸದಸ್ಯನಿಗೆ ವೀಸಾ ನೀಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಶ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

ನ್ಯೂಯಾರ್ಕ್ನಲ್ಲಿ ಮಂಗಳವಾರ(ಸೆ.13) ಆರಂಭಗೊAಡಿರುವ ವಿಶ್ವಸಂಸ್ಥೆಯ 77ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಶ್ಯ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸುತ್ತಿದೆ ಎಂದು ರಶ್ಯ ಹಲವು ಬಾರಿ ಟೀಕಿಸಿತ್ತು.

ವೀಸಾ ನೀಡಲು ವಿಳಂಬಿಸುವ ಮೂಲಕ ಅಮೆರಿಕವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಶ್ಯದ ಪೂರ್ಣ ಪ್ರಮಾಣದ ನಿಯೋಗದ ಭಾಗವಹಿಸುವಿಕೆಯನ್ನು ತಡೆಯುತ್ತಿದೆ ಎಂದು ರಶ್ಯ ಆರೋಪಿಸಿದೆ. ರಶ್ಯದ ಪೂರ್ಣಪ್ರಮಾಣದ ನಿಯೋಗಕ್ಕೆ ವೀಸಾ ನಿರಾಕರಿಸುವ ಮೂಲಕ ಅಮೆರಿಕ ತನ್ನ  ಬಾಧ್ಯತೆಗಳನ್ನು ಉಲ್ಲಂಘಿಸುತ್ತಿದೆ. ಈ ಪರಿಸ್ಥಿತಿಗಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಯನ್ನು ಹೊಣೆಯಾಗಿಸುತ್ತೇವೆ  ಎಂದು ರಶ್ಯ ಅಧ್ಯಕ್ಷರ ಕಚೇರಿ ಮಂಗಳವಾರ ಹೇಳಿಕೆ ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಉನ್ನತ ಮಟ್ಟದ ಅಧಿವೇಶನಕ್ಕೆ  ಮುಂದಿನ ವಾರ ಚಾಲನೆ ದೊರಕಲಿದೆ. 

ಮಂಗಳವಾರ ವಿದೇಶಾಂಗ ಸಚಿವ ಲಾವ್ರೋವ್ ಹಾಗೂ ಅವರೊಂದಿಗೆ ತೆರಳುವ ಸದಸ್ಯರಿಗೆ ವೀಸಾ ಒದಗಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಇಂಟರ್‌ಫಾಕ್ಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News