×
Ad

ಬ್ಯಾಂಕ್ ವಂಚನೆ ಪ್ರಕರಣ: ರಹಸ್ಯ ಲಾಕರ್‌ಗಳಿಂದ 431 ಕೆ.ಜಿ. ಚಿನ್ನ,ಬೆಳ್ಳಿ ವಶಪಡಿಸಿಕೊಂಡ ಈ.ಡಿ.

Update: 2022-09-14 21:39 IST

PHOTO: TWITTER@dir_ed
 

ಹೊಸದಿಲ್ಲಿ,ಸೆ.14: ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರವ ಹಣ ವರ್ಗಾವಣೆ ತನಿಖೆಯ ಅಂಗವಾಗಿ ಬುಧವಾರ ಚಿನ್ನ-ಬೆಳ್ಳಿ ಮಾರಾಟ ಕಂಪನಿಯೊಂದರ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಈ.ಡಿ.)ದ ಅಧಿಕಾರಿಗಳು ರಹಸ್ಯ ಲಾಕರ್‌ಗಳಲ್ಲಿದ್ದ 47 ಕೋ.ರೂ.ಗೂ ಅಧಿಕ ಮೌಲ್ಯದ ಒಟ್ಟು 431 ಕೆ.ಜಿ.ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಪಾರೇಖ್ ಅಲ್ಯುಮಿನಿಕ್ಸ್ ಲಿ.ಕಂಪನಿಯ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್ ಮೇಲೆ ದಾಳಿಗಳನ್ನು ನಡೆಸಲಾಗಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಯ ಸಂದರ್ಭದಲ್ಲಿ ರಕ್ಷಾ ಬುಲಿಯನ್ ಕಂಪನಿಯ ಆವರಣದಲ್ಲಿ ಕೆಲವು ರಹಸ್ಯ ಲಾಕರ್‌ಗಳ ಕೀಲಿ ಕೈ  ಪತ್ತೆಯಾಗಿದ್ದವು. ಖಾಸಗಿ ಲಾಕರ್‌ಗಳನ್ನು ಶೋಧಿಸಿದ ಬಳಿಕ ಯಾವುದೇ ಸೂಕ್ತ ನಿಯಮಗಳನ್ನು ಪಾಲಿಸದೆ ಅವುಗಳನ್ನು ಕಾರ್ಯಾಚರಿಸಲಾಗುತ್ತಿತ್ತು ಎನ್ನುವುದು ಪತ್ತೆಯಾಗಿದೆ. ಕೆವೈಸಿಯನ್ನು ಅನುಸರಿಸಲಾಗುತ್ತಿರಲಿಲ್ಲ,ಆವರಣದಲ್ಲಿ ಸಿಸಿಟಿವಿಯನ್ನು ಅಳವಡಿಸಿರಲಿಲ್ಲ ಹಾಗೂ ಆಗಮನ-ನಿರ್ಗಮನ ರಿಜಿಸ್ಟರ್‌ನ್ನೂ ಇಟ್ಟಿರಲಿಲ್ಲ ಎಂದು ಈ.ಡಿ.ಹೇಳಿದೆ. ಆವರಣದಲ್ಲಿ 761 ಲಾಕರ್‌ಗಳಿದ್ದು,ಈ ಪೈಕಿ ಮೂರು ರಕ್ಷಾ ಬುಲಿಯನ್‌ಗೆ ಸೇರಿದ್ದವು. ಲಾಕರ್‌ಗಳನ್ನು ತೆರೆದಾಗ ಎರಡರಲ್ಲಿ 91.5 ಕೆ.ಜಿ.ಚಿನ್ನದ ಗಟ್ಟಿಗಳು ಮತ್ತು 152 ಕೆ.ಜಿ.ಬೆಳ್ಳಿ ಪತ್ತೆಯಾಗಿದ್ದು,ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಕ್ಷಾ ಬುಲಿಯನ್‌ನ ಆವರಣದಿಂದ ಹೆಚ್ಚುವರಿಯಾಗಿ 188 ಕೆ.ಜಿ.ಬೆಳ್ಳಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 47.76 ಕೋ.ರೂ.ಗಳಾಗಿವೆ ಎಂದು ಹೇಳಿಕೆಯು ತಿಳಿಸಿದೆ.

ಪಾರೇಖ್ ಅಲ್ಯುಮಿನಿಕ್ಸ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ 2018,ಮಾರ್ಚ್‌ನಷ್ಟು ಹಳೆಯದಾಗಿದ್ದು,ಕಂಪನಿಯು ಬ್ಯಾಂಕುಗಳಿಂದ 2,296.58 ಕೋ.ರೂ.ಗಳ ಸಾಲವನ್ನು ಪಡೆದುಕೊಂಡು ವಂಚಿಸಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.2019ರಲ್ಲಿ 205 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News