ರಕ್ತಮಯವಾಗಿರುವ ಅಭಿವೃದ್ಧಿಯ ಹೆದ್ದಾರಿಗಳು

Update: 2022-09-15 03:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಯಾವುದೇ ಯುದ್ಧದಲ್ಲಿ ಸಂಭವಿಸಿದ ಸಾವು ನೋವುಗಳಿಗಿಂತ ಹೆಚ್ಚು ಸಾವು ನೋವುಗಳು ಪ್ರತೀ ವರ್ಷ ರಸ್ತೆಗಳಲ್ಲಿ ನಡೆಯುವ ಅವಘಡಗಳಿಂದ ಸಂಭವಿಸುತ್ತವೆ ಎನ್ನುವುದನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಬಾರಿ ಹೇಳಿದ್ದಾರೆ. ರಸ್ತೆಗಳಲ್ಲಿ ಸಂಭವಿಸುವ ಸಾವು ನೋವುಗಳಲ್ಲಿ ತನ್ನ ಸಹಭಾಗಿತ್ವವೂ ಇದೆ ಎನ್ನುವುದನ್ನು ಸರಕಾರ ಆತ್ಮಪೂರ್ವಕವಾಗಿ ಯಾವತ್ತೂ ಒಪ್ಪಿಕೊಂಡಿಲ್ಲ. ಆದುದರಿಂದ, ರಸ್ತೆಗಳಲ್ಲಿ ಸಂಭವಿಸುವ ದುರಂತಗಳು ಹೆಚ್ಚೆಂದರೆ, ಸಚಿವರ ವಿಷಾದ, ಸಂತಾಪಗಳಲ್ಲಿ ಮುಗಿದು ಹೋಗುತ್ತವೆ. ಸಣ್ಣ ಪುಟ್ಟ ಅವಘಡಗಳನ್ನು ಗಮನಿಸುವವರೇ ಇಲ್ಲ ಎನ್ನುವ ಸ್ಥಿತಿ ಭಾರತದಲ್ಲಿದೆ. ಆದರೂ ರಸ್ತೆ ಅವಘಡಗಳು ಕೆಲವೊಮ್ಮೆ ರಾಷ್ಟ್ರ ಮಟ್ಟದ ಸುದ್ದಿಯಾಗುತ್ತವೆ. ಅವುಗಳಿಗೆ ತಕ್ಷಣ ಸ್ಪಂದಿಸಿ, ಕೇಂದ್ರ ಸಚಿವರು ಹೇಳಿಕೆಗಳನ್ನೂ ನೀಡುತ್ತಾರೆ. ಆದರೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಹಿನ್ನೆಲೆಯ ಆಧಾರದ ಮೇಲೆ ಕೇಂದ್ರ ಸರಕಾರದಿಂದ ಇಂತಹ ಹೇಳಿಕೆಗಳು ಹೊರ ಬೀಳುತ್ತವೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅವಘಡದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಅವರು ಮೃತಪಟ್ಟರು. ಈ ದುರಂತ ವಾರವಿಡೀ ಸುದ್ದಿಯಾಯಿತು. ಈ ಅಪಘಾತವನ್ನು ಮುಂದಿಟ್ಟುಕೊಂಡು, ಚಾಲನಾ ಚಾಕಚಕ್ಯತೆ, ಸೀಟ್ ಬೆಲ್ಟ್‌ಗಳು ಮತ್ತು ವೇಗ ಮಿತಿಗಳ ಮಹತ್ವದ ಬಗ್ಗೆ ಪುಂಖಾನುಪುಂಖ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದವು. ಕಾರಿನಲ್ಲಿರುವ ಹಿಂಬದಿಯ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡುವ ಬಗ್ಗೆ ಸರಕಾರ ಹೇಳಿಕೆ ನೀಡಿತು. ರಸ್ತೆಯ ತುಂಬಾ ಅವಧಿ ಮುಗಿದ ವಾಹನಗಳೇ ಓಡಾಡುತ್ತಿರುವಾಗ, ಹೊಂಡಗಳ ನಡುವೆ ರಸ್ತೆಗಳಿರುವಾಗ ಈ ದೇಶದಲ್ಲಿ ಅಪಘಾತ ಸಂಭವಿಸುವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಸೀಟ್ ಬೆಲ್ಟ್ ಕಡ್ಡಾಯ ಮಾಡುವ ಮೂಲಕ ಅಪಘಾತಗಳನ್ನು ತಡೆಯಬಹುದು ಎನ್ನುವ ಸಚಿವರ ಹೇಳಿಕೆಯೇ ಅತ್ಯಂತ ಬಾಲಿಶತನದಿಂದ ಕೂಡಿದೆ. ರಸ್ತೆ ಸುರಕ್ಷತೆ ಎನ್ನುವುದು ಸೀಟ್ ಬೆಲ್ಟ್‌ನಷ್ಟೇ, ರಸ್ತೆಗಳ ವಿನ್ಯಾಸ ಮತ್ತು ನಿರ್ಮಾಣ ಹಾಗೂ ಅಪಘಾತದ ಬಳಿಕದ ತುರ್ತು ಆರೈಕೆಗಳೊಂದಿಗೆ ಸಂಬಂಧ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಗಳೂ ತಮ್ಮ ಜಾಗತಿಕ ರಸ್ತೆ ಸುರಕ್ಷಾ ಯೋಜನೆ 2021-2030ರಲ್ಲಿ ಇದಕ್ಕೆ ಒತ್ತು ನೀಡಿವೆ.

ರಸ್ತೆ ಅಪಘಾತಗಳು ಮತ್ತು ಅವುಗಳ ಕಾರಣಗಳನ್ನು ಪರೀಕ್ಷಿಸಲು ಹಾಗೂ ಸುರಕ್ಷತಾ ಯೋಜನೆಗಳನ್ನು ರೂಪಿಸಲು ಭಾರತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿಯಿದೆ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದೆ. 2019ರಲ್ಲಿ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ರಸ್ತೆ ಸುರಕ್ಷತೆಯನ್ನು ಬಲಪಡಿಸುವುದಕ್ಕಾಗಿ 7,000 ಕೋಟಿ ರೂಪಾಯಿ ವೆಚ್ಚದ ಸರಕಾರಿ ಬೆಂಬಲ ಕಾರ್ಯಕ್ರಮವೊಂದನ್ನೂ ಜಾರಿಗೊಳಿಸಿತು. ಆದರೂ, ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳಿಂದಾಗಿ ಮೃತಪಟ್ಟವರ ಜಾಗತಿಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಹಾಗಾದರೆ, ರಸ್ತೆ ಸುರಕ್ಷತೆಯಲ್ಲಿ ನಾವು ಎಲ್ಲಿ ಎಡವಿದ್ದೇವೆ?

ಭಾರತದ ರಸ್ತೆಗಳೇಕೆ ಯಾವುದೇ ರಣರಂಗಕ್ಕಿಂತಲೂ ಭೀಕರವಾದ ಸಾವುನೋವುಗಳಿಗೆ ವೇದಿಕೆಯಾಗಿವೆ? ಉತ್ತರ ಸ್ಪಷ್ಟ . ಭಾರತದ ರಸ್ತೆಗಳು ರಾಜಕಾರಣಿಗಳಿಗೆ, ಇಂಜಿನಿಯರ್‌ಗಳಿಗೆ, ಗುತ್ತಿಗೆದಾರರಿಗೆ ಹಣ ಮಾಡುವ ಹೆದ್ದಾರಿಗಳು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲೆಂದು ಮಂಗಳೂರಿಗೆ ಬಂದರು. ಹೊಂಡಗಳಿಂದ ತುಂಬಿ ತುಳುಕಾಡುತ್ತಿದ್ದ ಹೆದ್ದಾರಿ ಪ್ರಧಾನಿ ಬರುತ್ತಾರೆ ಎಂದಾಕ್ಷಣ ಏಕಾಏಕಿ ನವೀಕರಣಗೊಂಡಿತು. ಅದಾಗಲೇ ಮಂಗಳೂರು ರಸ್ತೆಗಳಲ್ಲಿರುವ ಹೊಂಡಗಳ ಕಾರಣದಿಂದ ಹತ್ತು ಹಲವು ಅಮಾಯಕರ ಸಾವುಗಳು ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದವು. ಆಗ ಎಚ್ಚೆತ್ತುಕೊಳ್ಳದ ರಾಜಕಾರಣಿಗಳು, ಪ್ರಧಾನಿ ಆಗಮಿಸುತ್ತಾರೆ ಎಂದಾಕ್ಷಣ ರಸ್ತೆಯನ್ನು ನವೀಕರಣಗೊಳಿಸುತ್ತಾರೆ. ಅವರು ಹೋದ ಬೆನ್ನಿಗೇ ಆ ರಸ್ತೆಯೂ ಒಂದೆರಡು ಮಳೆಗೆ ಮತ್ತೆ ಹಿಂದಿನಂತಾಗುತ್ತದೆ. ರಸ್ತೆ ಕಾಮಗಾರಿಯ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಇದೊಂದು ಸಣ್ಣ ಉದಾಹರಣೆ. ಇಂತಹ ರಸ್ತೆಗಳನ್ನು ಇಟ್ಟುಕೊಂಡು, ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕನಿಗೆ ದಂಡವಿಧಿಸುವುದರಿಂದ ಅಪಘಾತಗಳನ್ನು ತಡೆಯಲು ಸಾಧ್ಯವೇ? ಸಾರಿಗೆ ಇಲಾಖೆಗಳು ಭ್ರಷ್ಟಾಚಾರಗಳ ಕೂಪವಾಗಿವೆ. ಕನಿಷ್ಠ ಆ ಇಲಾಖೆಗಳಲ್ಲಿ, ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೂ, ಅಲ್ಲಿ ನಡೆಯುವ ಅಕ್ರಮಗಳು ಅರ್ಧಕ್ಕರ್ಧ ತಗ್ಗಬಹುದು. ಅಕ್ರಮಗಳಲ್ಲಿ ಇಳಿಕೆಯಾದಷ್ಟೂ, ಅಪಘಾತಗಳೂ ಇಳಿಕೆಯಾಗುತ್ತವೆ. ರಸ್ತೆ ಅಪಘಾತದ ಕಾರಣಗಳನ್ನು ವಿಶ್ಲೇಷಣೆ ಮಾಡಿದರೆ ಹಲವು ಅಂಶಗಳು ಮುನ್ನೆಲೆಗೆ ಬರುತ್ತವೆ. ಶರಾಬು ಕುಡಿದು ವಾಹನ ಚಲಾಯಿಸುವುದು, ಸೀಟ್ ಬೆಲ್ಟ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸದ ಸಹ ಪ್ರಯಾಣಿಕರು, ತರಬೇತಿ ಇಲ್ಲದ ಚಾಲಕರು, ವೇಗವಾಗಿ ಸವಾರಿ ಮಾಡುವ ಸಂಸ್ಕೃತಿ, ರಸ್ತೆಗಳಲ್ಲಿ ಸ್ಥಳಕ್ಕಾಗಿ ಕೊಸರಾಡುವ ಜನರು ಮತ್ತು ಆಕಳುಗಳು ಹಾಗೂ ರಸ್ತೆಗಳ ಕಳಪೆ ಗುಣಮಟ್ಟ ಮತ್ತು ಕೆಟ್ಟ ವಿನ್ಯಾಸ- ಇವೆಲ್ಲವನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಸ್ತೆಗಳ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಸರಕಾರ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳನ್ನು ರೂಪಿಸುವ ಮುನ್ನ, ಹಿಂದಿನ ಅಪಘಾತಗಳ ವಿಶ್ಲೇಷಣೆಗಳನ್ನು ಆಧರಿಸಿದ ತಂತ್ರೋಪಾಯಗಳನ್ನು ಸಿದ್ಧಪಡಿಸಬೇಕು. ಉದಾಹರಣೆಗೆ; ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧದ ಕ್ರಮವನ್ನು ಸುಧಾರಿಸಲು ಎಷ್ಟು ಖರ್ಚು ತಗಲುತ್ತದೆ ಮತ್ತು ಅದಕ್ಕಾಗಿ ಆಡಳಿತದಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು? ಚಾಲನಾ ಪರವಾನಿಗೆ ಪತ್ರವನ್ನು ನೀಡುವ ಮುನ್ನ ವಹಿಸಬೇಕಾದ ಮುಂಜಾಗೃತೆ, ಅಪಘಾತ ಸಂಭವಿಸಿದರೆ ಅದರ ತೀವ್ರತೆಯನ್ನು ತಗ್ಗಿಸುವ ರಸ್ತೆ ತಿರುವುಗಳನ್ನು ಅಥವಾ ರಸ್ತೆ ವಿಭಾಜಕಗಳನ್ನು ನಿರ್ಮಿಸಲು ಯಾವ ಪರ್ಯಾಯ ತಂತ್ರಜ್ಞಾನಗಳು ಲಭ್ಯವಿವೆ? ಆ ತಂತ್ರಜ್ಞಾನಗಳಿಗೆ ಎಷ್ಟು ಖರ್ಚು ತಗಲುತ್ತದೆ? ಅವುಗಳನ್ನು ಪಡೆದುಕೊಳ್ಳುವ ನೀತಿಯಲ್ಲಿ ಯಾವುದಾದರೂ ಬದಲಾವಣೆಗಳ ಅಗತ್ಯವಿದೆಯೇ? ಎಂಬ ವಿಷಯಗಳ ಬಗ್ಗೆ ಮುಂಚಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ವಿಶ್ವಬ್ಯಾಂಕ್‌ನ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿ ಸಾಯುವವರ ಮತ್ತು ಗಾಯಗೊಳ್ಳುವವರ ಸಂಖ್ಯೆಯು 50 ಶೇಕಡದಷ್ಟು ಕಡಿಮೆಯಾದರೆ 2014ರಲ್ಲಿದ್ದ ನಮ್ಮ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ 14 ಶೇಕಡದಷ್ಟು ಹೆಚ್ಚುವರಿ ಆದಾಯವನ್ನು ಗಳಿಸಲು ನಮಗೆ ಸಾಧ್ಯವಾಗುತ್ತದೆ. ರಸ್ತೆ ಅಪಘಾತಗಳಿಂದಾಗಿ ಸಂಭವಿಸುವ ಸಾವುಗಳು ಮತ್ತು ಅಂಗವೈಕಲ್ಯಗಳು ಕಳಪೆ ಆರೋಗ್ಯ ಸ್ಥಿತಿಗತಿಗೂ ಕಾರಣವಾಗುತ್ತದೆ. ರಸ್ತೆ ಸುರಕ್ಷತೆ ಹೆಚ್ಚಿದಷ್ಟೂ ನಮ್ಮ ಆರೋಗ್ಯ ಕ್ಷೇತ್ರದ ಫಲಿತಾಂಶ ಸುಧಾರಿಸುತ್ತದೆ. ಹೆದ್ದಾರಿಗಳು ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವ ರಹದಾರಿಗಳು. ಆ ದಾರಿಯೇ ದುರಂತಮಯವಾದರೆ, ಈ ದೇಶದ ಅಭಿವೃದ್ಧಿಯ ಗತಿಯೂ ದುರಂತದೆಡೆಗೇ ಸಾಗಲಿದೆ ಎನ್ನುವ ಎಚ್ಚರಿಕೆ ಸರಕಾರಕ್ಕಿರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News