ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾದ ದಲಿತ ಸಹೋದರಿಯರು; ಅತ್ಯಾಚಾರ ಆರೋಪ

Update: 2022-09-15 01:56 GMT

ಬರೇಲಿ (ಉತ್ತರಪ್ರದೇಶ): ಅಪ್ರಾಪ್ತ ವಯಸ್ಸಿನ ಇಬ್ಬರು ದಲಿತ ಬಾಲಕಿಯರ ಶವ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಲಖೀಮ್‍ಪುರ್ ಖೇರಿ ಜಿಲ್ಲೆಯ ನಿಗಾಸನ್ ಗ್ರಾಮದಿಂದ ವರದಿಯಾಗಿದೆ.

"ಇಬ್ಬರು ಮಕ್ಕಳನ್ನು ಬೈಕ್‍ನಲ್ಲಿ ಬಂದ ಮೂವರು ಬುಧವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಅಪಹರಿಸಿದ್ದರು. ಮೂರು ಗಂಟೆ ಬಳಿಕ ಕಬ್ಬಿನ ಗದ್ದೆಯ ಬಳಿ 14 ಮತ್ತು 17 ವರ್ಷ ವಯಸ್ಸಿನ ಬಾಲಕಿಯರ ಶವ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ" ಎಂದು ಬಾಲಕಿಯರ ತಾಯಿ ಹೇಳಿದ್ದಾರೆ. ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದು ಕುಟುಂಬದ ಆರೋಪ.

ಶವಗಳನ್ನು ನೋಡಿದ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಆಡಳಿತ ಯಂತ್ರದ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಂಜೀವ್ ಸುಮನ್ ಸ್ಥಳಕ್ಕೆ ಧಾವಿಸಿದ್ದಾರೆ. ಲಕ್ನೋ ವಲಯ ಐಜಿ ಕೂಡಾ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

"ಬಾಲಕಿಯರ ಮೃತದೇಹ ಪತ್ತೆಯಾಗುವವರೆಗೆ ಕುಟುಂಬದವರು ಯಾವುದೇ ದೂರು ನೀಡಿರಲಿಲ್ಲ. ಸಾವಿನ ಕಾರಣ ಪತ್ತೆಗಾಗಿ ದೇಹಗಳನ್ನು ಅಟಾಪ್ಸಿಗೆ ಕಳುಹಿಸಲಾಗಿದೆ. ಆದಾಗ್ಯೂ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ" ಎಂದು ಎಸ್ಪಿ ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News