ಸಿಜೆಐ ಪ್ರಕರಣ ಲಿಸ್ಟಿಂಗ್ ವ್ಯವಸ್ಥೆಯನ್ನು ಟೀಕಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ!
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಹೊಸದಾಗಿ ಜಾರಿಗೆ ತಂದಿರುವ ಪ್ರಕರಣಗಳ ಹೊಸ ಲಿಸ್ಟಿಂಗ್ ವ್ಯವಸ್ಥೆಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಬಹಿರಂಗವಾಗಿ ಟೀಕಿಸಿದ ವಿರಳಾತಿವಿರಳ ನಿದರ್ಶನಕ್ಕೆ ಸುಪ್ರೀಂಕೋರ್ಟ್ ಸಾಕ್ಷಿಯಾಯಿತು.
ಹೊಸ ಲಿಸ್ಟಿಂಗ್ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಆಕ್ಷೇಪಿಸಿದೆ. ನ್ಯಾಯಮೂರ್ತಿಗಳಾದ ಕೌಲ್ ಹಾಗೂ ಅಭಯ್ ಎಸ್.ಓಕಾ ಈ ಸಂಬಂಧ ಆದೇಶ ನೀಡಿದ್ದಾರೆ. ನಾಗೇಶ್ ಚೌಧರಿ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ನವೆಂಬರ್ 15ಕ್ಕೆ ಮುಂದೂಡಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಹೊಸ ಲಿಸ್ಟಿಂಗ್ ವ್ಯವಸ್ಥೆ, ಈ ಪ್ರಕರಣದಂತೆ, ವಿಚಾರಣೆಗೆ ನಿಗದಿಪಡಿಸಿದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿಗಳಿಗೆ ಸಾಕಷ್ಟು ಕಾಲಾವಕಾಶ ನೀಡುವುದಿಲ್ಲ. ಮಧ್ಯಾಹ್ನ ನಂತರದ ಅಧಿವೇಶನದಲ್ಲೇ ಹಲವು ಪ್ರಕರಣಗಳು ಇರುತ್ತವೆ" ಎಂದು ಅಭಿಪ್ರಾಯಪಟ್ಟಿದೆ.
ಭಾರತದ 49ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಲಲಿತ್ ಅವರ ಲಿಸ್ಟಿಂಗ್ ವ್ಯವಸ್ಥೆಯನ್ನು ಬದಲಿಸಿದ್ದು, ಇದನ್ನು ನಿವೃತ್ತ ಸಿಜೆಐ ಎನ್.ವಿ.ರಮಣ ಕೂಡಾ ಟೀಕಿಸಿದ್ದರು. ಹೊಸ ಪ್ರಕರಣಗಳು ವಿಚಾರಣೆಗೆ ಪಟ್ಟಿಯಾಗುತ್ತಿಲ್ಲ ಎಂದು ವಕೀಲರು ಕೂಡಾ ಆಪಾದಿಸಿದ್ದರು.
ಸಿಜೆಐ ಹೊಸದಾಗಿ ಆರಂಭಿಸಿರುವ ವ್ಯವಸ್ಥೆಯಡಿ 30 ಮಂದಿ ನ್ಯಾಯಮೂರ್ತಿಗಳು ಎರಡು ಭಿನ್ನ ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸೋಮವಾರದಿಂದ ಬುಧವಾರದ ವರೆಗೆ 15 ಭಿನ್ನ ಪೀಠಗಳಲ್ಲಿ ಅವರು ಜತೆ ಸೇರಿ ಹೊಸದಾಗಿ ಸಲ್ಲಿಕೆಯಾದ ದಾವೆಗಳ ವಿಚಾರಣೆ ನಡೆಸುತ್ತಾರೆ. ಈ ಪ್ರಕರಣಗಳು ದಿನಕ್ಕೆ 60ಕ್ಕಿಂತ ಅಧಿಕ ಇರುತ್ತವೆ ಎಂದು timesofindia.com ವರದಿ ಮಾಡಿದೆ.