ಬೆತ್ತಲೆ ಫೋಟೊ ಪ್ರಕರಣ: ದೂರಿನಲ್ಲಿ ಉಲ್ಲೇಖಿತ ನನ್ನ ಚಿತ್ರವನ್ನು ತಿರುಚಲಾಗಿದೆ ಎಂದ ನಟ ರಣವೀರ್ ಸಿಂಗ್
ಮುಂಬೈ,ಸೆ.15: ಬೆತ್ತಲೆ ಫೋಟೊ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಚೆಂಬೂರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಬಾಲಿವುಡ್ ನಟ ರಣವೀರ ಸಿಂಗ್ ಅವರು,ತನ್ನ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿರುವ ತನ್ನ ನಗ್ನಚಿತ್ರವನ್ನು ತಿರುಚಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಂಗ್ ಆ.29ರಂದು ಪೊಲೀಸರೆದುರು ನೀಡಿದ್ದ ಹೇಳಿಕೆಯು ಗುರುವಾರ ಬಹಿರಂಗಗೊಂಡಿದೆ.
ಜು.22ರಂದು ತನ್ನ ನಗ್ನಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಸಿಂಗ್ ವಿರುದ್ಧ ಜು.26ರಂದು ದೂರು ದಾಖಲಾದ ಬಳಿಕ ಪೊಲೀಸರು ಅವರಿಗೆ ಸಮನ್ಸ್ ಜಾರಿಗೊಳಿಸಿದ್ದರು.
ಚಿತ್ರಗಳು ನ್ಯೂಯಾರ್ಕ್‌ನ ‘ಪೇಪರ್ ’ ಮ್ಯಾಗಝಿನ್ ನಡೆಸಿದ್ದ ಪೋಟೋ ಶೂಟ್‌ನ ಭಾಗವಾಗಿದ್ದು,ಸಿಂಗ್ ಟರ್ಕಿಷ್ ರಗ್‌ನ ಮೇಲೆ ನಗ್ನವಾಗಿ ಕುಳಿತಿದ್ದನ್ನು ತೋರಿಸಿವೆ.
ದೂರಿಗೆ ಆಧಾರವಾಗಿರುವ ಫೋಟೊಗಳಲ್ಲೊಂದು ತಾನು ಅಪ್‌ಲೋಡ್ ಮಾಡಿದ್ದ ಏಳು ಚಿತ್ರಗಳಲ್ಲಿ ಇರಲಿಲ್ಲ. ತಾನು ಅಪ್‌ಲೋಡ್ ಮಾಡಿದ್ದ ಚಿತ್ರಗಳು ಅಶ್ಲೀಲವಾಗಿರಲಿಲ್ಲ ಮತ್ತು ತಾನು ಒಳಉಡುಪನ್ನು ಧರಿಸಿದ್ದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ಹೇಳಿದರು. ತನ್ನ ಖಾಸಗಿ ಅಂಗಗಳು ಗೋಚರಿಸುತ್ತಿವೆ ಎಂದು ದೂರುದಾರರು ಆರೋಪಿಸಿರುವ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಮತ್ತು ಅದು ಫೋಟೊಶೂಟ್‌ನ ಭಾಗವಾಗಿರಲಿಲ್ಲ ಎಂದೂ ಸಿಂಗ್ ತಿಳಿಸಿದ್ದಾರೆ ಎಂದರು. ಚಿತ್ರವನ್ನು ಮಾರ್ಫ್ ಮಾಡಲಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.