'ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ' ಎಂದಿದ್ದ ಯೂಟ್ಯೂಬರ್ ಗೆ ಆರು ತಿಂಗಳ ಸಜೆ
ಚೆನ್ನೈ: ತಮಿಳು ಯೂಟ್ಯೂಬರ್ ಸವುಕ್ಕು ಶಂಕರ್ ಅವರನ್ನು ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿದ ಮದ್ರಾಸ್ ಹೈಕೋರ್ಟ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು scroll.in ವರದಿ ಮಾಡಿದೆ.
ತಮಿಳುನಾಡು ವಿಜಿಲೆನ್ಸ್ ಇಲಾಖೆಯ ಮಾಜಿ ಉದ್ಯೋಗಿಯಾಗಿರುವ ಶಂಕರ್, ತಮ್ಮ ಯೂಟ್ಯೂಬ್ ಚಾನೆಲ್ 'Redpix' ನಲ್ಲಿ "ಇಡೀ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ" ಎಂದು ಹೇಳಿದ್ದಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ನ್ಯಾಯಮೂರ್ತಿಗಳಾದ ಜಿಆರ್ ಸ್ವಾಮಿನಾಥನ್ ಮತ್ತು ಬಿ ಪುಗಲೇಂತಿ ಅವರ ಪೀಠವು ಆದೇಶಕ್ಕೆ ತಡೆಯಾಜ್ಞೆ ನೀಡಲು ಅಥವಾ ಶಂಕರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಲು ನಿರಾಕರಿಸಿದ್ದಾರೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಶಂಕರ್ ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದ್ದು, ತಾನು ತನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಎಂದು ಹೈಕೋರ್ಟ್‌ಗೆ ತಿಳಿಸಿರುವುದಾಗಿ 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ.
"ನನ್ನ ಕೆಲವು ಪ್ರತಿಕ್ರಿಯೆಗಳನ್ನು ಪ್ರತ್ಯೇಕವಾಗಿ ನೋಡಿದಾಗ ಸಮಸ್ಯಾತ್ಮಕವಾಗಿ ಕಾಣಿಸಬಹುದು. ಆದರೆ, ಅದರ ಸಂದರ್ಭದ ಹಿನ್ನೆಲೆಯಲ್ಲಿ ನೋಡಿದಾಗ ಸತ್ಯ ಸ್ಪಷ್ಟವಾಗುತ್ತದೆ. ನ್ಯಾಯಾಂಗದ ಘನತೆಗೆ ಕುಂದು ತರುವುದು ನನ್ನ ಉದ್ದೇಶವಲ್ಲ.” ಎಂದು ಸವುಕ್ಕು ಶಂಕರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನನ್ನ ಫೋಟೋವನ್ನು ತಿರುಚಲಾಗಿದೆ ಎಂದ ನಟ ರಣವೀರ್ ಸಿಂಗ್