ತೈವಾನ್ ಮೇಲಿನ ಆಕ್ರಮಣ ತಡೆಯಲು ಚೀನಾ ವಿರುದ್ಧ ನಿರ್ಬಂಧ ಜಾರಿಗೆ ಅಮೆರಿಕ ಚಿಂತನೆ: ವರದಿ

Update: 2022-09-15 16:27 GMT

ವಾಷಿಂಗ್ಟನ್, ಸೆ.15: ತೈವಾನ್ ಮೇಲೆ ಚೀನಾ ಆಕ್ರಮಣ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಚೀನಾದ ಮೇಲೆ ಹಲವು ನಿರ್ಬಂಧ ಜಾರಿಗೊಳಿಸುವ ಪ್ರಸ್ತಾವನೆಯನ್ನು ಅಮೆರಿಕ ಪರಿಶೀಲಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವ ರದಿ ಮಾಡಿವೆ.

ಈ ಮಧ್ಯೆ, ತನ್ನ ಸಾರ್ವಭೌಮತ್ವದ ಪ್ರತಿಪಾದನೆಯನ್ನು ಬೆಂಬಲಿಸುವಂತೆ  ಯುರೋಪಿಯನ್ ಯೂನಿಯನ್‍ಗೆ ತೈವಾನ್ ಆಗ್ರಹಿಸಿದೆ. ಚೀನಾದ ವಿರುದ್ಧ ನಿರ್ಬಂಧ, ಯುರೋಪಿಯನ್ ಯೂನಿಯನ್ ಮೇಲೆ  ತೈವಾನ್‍ನ ರಾಜತಾಂತ್ರಿಕ ಒತ್ತಡ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಕಂಪ್ಯೂಟರ್ ಚಿಪ್‍ಗಳು ಹಾಗೂ ಟೆಲಿಕಾಂ ಉಪಕರಣಗಳಂತಹ ಸೂಕ್ಷ್ಮ ತಂತ್ರಜ್ಞಾನಗಳಲ್ಲಿ ಚೀನಾದೊಂದಿಗೆ ಕೆಲವು ವ್ಯಾಪಾರ ಮತ್ತು ಹೂಡಿಕೆಯನ್ನು ನಿರ್ಬಂಧಿಸಲು ಪಾಶ್ಚಿಮಾತ್ಯ ದೇಶಗಳು ಈಗಾಗಲೇ ತೆಗೆದುಕೊಂಡಿರುವ  ಕ್ರಮಗಳನ್ನು ಮೀರಿ ನಿರ್ಬಂಧ ಜಾರಿಗೆ ಚಿಂತನೆ ನಡೆಸಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಚಿಪ್ ತಯಾರಿಕೆ ಉಪಕರಣಗಳಿಗೆ ಬಳಸಲಾಗುವ ಸೆಮಿಕಂಡಕ್ಟರ್‍ಗಳನ್ನು ಚೀನಾಕ್ಕೆ ರಫ್ತು ಮಾಡುವುದರ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ವ್ಯಾಪಕಗೊಳಿಸಲು ನಿರ್ಧರಿಸಲಾಗಿದೆ. ಮಿಲಿಟರಿ ಆಧುನೀಕರಣಕ್ಕೆ ಅನ್ವಯವಾಗುವ ಅಮೆರಿಕ ತಂತ್ರಜ್ಞಾನವನ್ನು ಚೀನಾ ಸ್ವಾಧೀನಪಡಿಸಿಕೊಳ್ಳದಂತೆ ತಡೆಯುವುದು ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತರಲು, ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಹಿತಾಸಕ್ತಿಗಳನ್ನು ರಕ್ಷಿಸಲು ಸಮಗ್ರ ವಿಧಾನವನ್ನು ರೂಪಿಸಲಾಗುತ್ತಿದೆ ಎಂದು ಅಮೆರಿಕದ ವಾಣಿಜ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಆದರೆ ಚೀನಾದ ಮೇಲಿನ ಸಂಭಾವ್ಯ ನಿರ್ಬಂಧ ಹೇರಿಕೆ ರಶ್ಯ ವಿರುದ್ಧದ ನಿರ್ಬಂಧ ಪ್ರಕ್ರಿಯೆಗಿಂತ ಭಿನ್ನ ಮತ್ತು ಸಂಕೀರ್ಣ ವಿಷಯವಾಗಿದೆ. ಚೀನಾದ ಜತೆಗಿನ  ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳ ಸಂಬಂಧ ವ್ಯಾಪಕವಾಗಿರುವುದರಿಂದ ನಿರ್ಬಂಧ ಜಾರಿ ಅತ್ಯಂತ ಜಟಿಲವಾಗಿದೆ. ವಿಶ್ವದ 2ನೇ ಅತೀ ದೊಡ್ಡ ಆರ್ಥಿಕತೆ ಮತ್ತು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಕೊಂಡಿಯಾಗಿರುವ  ಚೀನಾದ ಮೇಲಿನ ನಿರ್ಬಂಧತೆಯ ಕಲ್ಪನೆ ಕಾರ್ಯಸಾಧ್ಯತೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಅಮೆರಿಕ ವಾಣಿಜ್ಯ ಇಲಾಖೆಯ ಮಾಜಿ ಅಧಿಕಾರಿ ನಝಾಕ್ ನಿಕಾಖ್ತರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News