ತೈವಾನ್‍ಗೆ ಮಿಲಿಟರಿ ನೆರವಿನಿಂದ ಗಂಭೀರ ಪರಿಣಾಮ: ಚೀನಾ ಎಚ್ಚರಿಕೆ

Update: 2022-09-15 16:28 GMT

ಬೀಜಿಂಗ್, ಸೆ.15: ತೈವಾನ್‍ಗೆ ನೇರವಾಗಿ ಮಿಲಿಟರಿ ನೆರವು ಒದಗಿಸುವ ಅಮೆರಿಕದ ಮಸೂದೆಯು ತೈವಾನ್ ಸ್ವಾತಂತ್ರ್ಯ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳಿಗೆ ಗಂಭೀರ ತಪ್ಪು ಸಂಕೇತ ರವಾನಿಸಲಿದೆ ಎಂದು ಚೀನಾ ಗುರುವಾರ ಎಚ್ಚರಿಸಿದೆ.

ಒಂದು ವೇಳೆ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯುವ ಪ್ರಕ್ರಿಯೆ ಮುಂದುವರಿದರೆ ಇದು ಚೀನಾ-ಅಮೆರಿಕ ಸಂಬಂಧಗಳ ರಾಜಕೀಯ ಅಡಿಪಾಯವನ್ನು ತೀವ್ರವಾಗಿ ಅಲುಗಾಡಿಸಲಿದೆ ಮತ್ತು ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ತೈವಾನ್‍ಗೆ ನೇರವಾಗಿ ಕೋಟ್ಯಾಂತರ ಡಾಲರ್ ಮೊತ್ತದ  ಮಿಲಿಟರಿ ನೆರವು ಒದಗಿಸುವ ನಿಟ್ಟಿನಲ್ಲಿ ಅಮೆರಿಕದ ಸಂಸದೀಯ ಸಮಿತಿ ಬುಧವಾರ ಪ್ರಥಮ ಹೆಜ್ಜೆ ಇರಿಸಿದ್ದು ಈ ಮೂಲಕ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಅಧಿಕೃತಗೊಳಿಸಲು ಮುಂದಾಗಿದೆ. ದಶಕಗಳಿಂದಲೂ ಅಮೆರಿಕವು ತೈವಾನ್‍ಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತಾ ಬಂದಿದೆ. ಆದರೆ ನೂತನ ಮಸೂದೆಯು ತೈವಾನ್‍ಗೆ 4 ವರ್ಷದ ಅವಧಿಗೆ 4.5 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಒದಗಿಸುವ ಜತೆಗೆ, ಒಂದು ವೇಳೆ ತೈವಾನ್ ಮೇಲೆ ಆಕ್ರಮಣ ಎಸಗಿದರೆ ಚೀನಾದ ವಿರುದ್ಧ ನಿರ್ಬಂಧ ವಿಧಿಸಲು ಅವಕಾಶ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News