ಪುಟಿನ್‌ ಜೊತೆ ಮಾತುಕತೆ ವೇಳೆ ಹೆಡ್‌ಫೋನ್‌ ಸಿಕ್ಕಿಸಲು ಹೆಣಗಾಡಿ ಮುಜುಗರಕ್ಕೀಡಾದ ಪಾಕ್‌ ಪ್ರಧಾನಿ

Update: 2022-09-16 09:26 GMT
Photo: Twitter/@ShireenMazari1

ಹೊಸದಿಲ್ಲಿ: ಉಝ್ಬೆಕಿಸ್ತಾನದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಶೃಂಗಸಭೆಯ ಸಂದರ್ಭ ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆಗೆ ನೇರ ಮಾತುಕತೆಗಳ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಅವರು ಹೆಡ್‌ಫೋನ್‌ ಸಿಕ್ಕಿಸಲು ಹೆಣಗಾಡಿ ಮುಜುಗರಕ್ಕೀಡಾಗಿರುವುದರ ಜೊತೆಗೆ ಪಾಕ್‌ ಪ್ರಧಾನಿಯ ಪೇಚಾಟವನ್ನು ನೋಡಿ ಪುಟಿನ್‌ ನಕ್ಕ ಘಟನೆಯೂ ವೀಡಿಯೋದಲ್ಲಿ ಸೆರೆಯಾಗಿದೆ.

ಶಾಂಘೈ ಸಹಕಾರ ಸಂಘಟನೆಯ 22ನೇ ಶೃಂಗಸಭೆ ನಡೆಯುತ್ತಿರುವ ಸಮರಖಂಡ್‌ನಲ್ಲಿ ಮಾತುಕತೆ ವೇಳೆ ಮೊದಲು ಶರೀಫ್‌ ಕಿವಿಯಿಂದ ಹೆಡ್‌ಫೋನ್‌ ಕೆಳಕ್ಕೆ ಬಿದ್ದಿತ್ತು. ಆರಂಭದಲ್ಲಿ ಅದನ್ನು ಸಿಕ್ಕಿಸಲು ಹೆಣಗಾಡಿದ ಪಾಕ್‌ ಪ್ರಧಾನಿ ನಂತರ ಅಧಿಕಾರಿಯೊಬ್ಬರ ಸಹಾಯ ಪಡೆದರು. ಪುಟಿನ್‌ ಈ ಬೆಳವಣಿಗೆಯನ್ನು ಗಮನಿಸುತ್ತಾ ಇದ್ದರು. ಮಾತುಕತೆ ಆರಂಭಗೊಳ್ಳುತ್ತಿದ್ದಂತೆಯೇ ಹೆಡ್‌ಫೋನ್‌ ಮತ್ತೆ ಕೆಳಕ್ಕೆ ಬಿದ್ದಾಗ ಪುಟಿನ್‌ ಅವರು ನಕ್ಕ ಘಟನೆ ವಿಡಿಯೋ ವೈರಲ್ ಆಗಿದೆ.

ಈ ಘಟನೆ ದೇಶಕ್ಕೆ ಒಂದು ಮುಜುಗರ ಸೃಷ್ಟಿಸಿದೆ ಎಂದು ಶರೀಫ್‌ ಅವರು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ತೆಹ್ರೀಕ್-ಇ-ಇನ್ಸಾಫ್‌ ಪಕ್ಷದವರಿಂದ ಟೀಕೆಗೊಳಗಾಗಿದ್ದಾರೆ.

ಪಾಕಿಸ್ತಾನದ ವಿಪಕ್ಷ ನಾಯಕರೊಬ್ಬರು ಶೃಂಗಸಭೆಯ ಇನ್ನೊಂದು ಫೋಟೋ ಶೇರ್‌ ಮಾಡಿ ಶರೀಫ್‌ ಅವರ ಇಡೀ ನಿಯೋಗ ಭಿಕ್ಷುಕರಂತೆ ಸುಮ್ಮನೆ ಕುಳಿತುಕೊಂಡಿದೆ ಎಂದು ಬರೆದಿದ್ದಾರೆ. ಪಾಕ್‌ ನಿಯೋಗದಲ್ಲಿ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಝರ್ದಾರಿ, ವಿತ್ತ ಸಚಿವ ಮಿಫ್ತಾಹ್‌ ಇಸ್ಮಾಯಿಲ್‌ ಮತ್ತು ರಕ್ಷಣಾ ಸಚಿವ ಖವಾಜ ಆಸಿಫ್‌ ಇದ್ದಾರೆ.

ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News