ಅಂಬುಜಾ,ಎಸಿಸಿ ಸ್ವಾಧೀನದೊಂದಿಗೆ ಅದಾನಿ ಗ್ರೂಪ್ ಈಗ ದೇಶದ 2ನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ

Update: 2022-09-17 16:48 GMT
ಗೌತಮ್ ಅದಾನಿ (PTI)

ಹೊಸದಿಲ್ಲಿ,ಸೆ.17: ಅಂಬುಜಾ ಸಿಮೆಂಟ್ಸ್(Ambuja Cements) ಮತ್ತು ಎಸಿಸಿ ಲಿ. (ACC Limited)ನ ಸ್ವಾಧೀನ ಪ್ರಕ್ರಿಯೆಯನ್ನು ಶುಕ್ರವಾರ ಅಂತಿಮಗೊಳಿಸುವ ಮೂಲಕ ಅದಾನಿ ಗ್ರೂಪ್(Adani Group) ಭಾರತದ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕನಾಗಿ ಹೊರಹೊಮ್ಮಿದೆ.

1.87 ಲ.ಕೋ.ರೂ.ಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಅಲ್ಟ್ರಾಟೆಕ್ ಸಿಮೆಂಟ್ ದೇಶದ ಅತ್ಯಂತ ದೊಡ್ಡ ಸಿಮೆಂಟ್ ಉತ್ಪಾದಕ ಕಂಪನಿಯಾಗಿದೆ.

ಅಂಬುಜಾ ಸಿಮೆಂಟ್ಸ್‌ನಲ್ಲಿ ಶೇ.63.1 ಮತ್ತು ಎಸಿಸಿ ಲಿ.ನಲ್ಲಿ ಶೇ.54.5 ಪಾಲು ಬಂಡವಳವನ್ನು ಖರೀದಿಸಲು ತಾನು ಸ್ವಿಟ್ಝರ್‌ಲ್ಯಾಂಡ್ ಮೂಲದ ಹೋಲ್ಸಿಮ್ ಲಿಮಿಟೆಡ್‌ಗೆ 6.4 ಶತಕೋಟಿ ಡಾ.(51,000 ಕೋ.ರೂ.ಗೂ ಅಧಿಕ)ಗಳನ್ನು ಪಾವತಿಸಿದ್ದಾಗಿ ಗೌತಮ್ ಅದಾನಿ ನೇತೃತ್ವದ ಉದ್ಯಮ ಸಮೂಹವು ಶುಕ್ರವಾರ ತಿಳಿಸಿದೆ.

ಅದಾನಿ ಕುಟುಂಬವು ಎಂಡೀವರ್ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಲಿ.ಮೂಲಕ ಅಂಬುಜಾ ಸಿಮೆಂಟ್ಸ್ ಲಿ.ಮತ್ತು ಎಸಿಸಿ ಲಿ.ಸ್ವಾಧೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಸ್ವಾಧೀನವು ಅದಾನಿ ಗ್ರೂಪ್‌ನ ಈವರೆಗಿನ ಅತ್ಯಂತ ದೊಡ್ಡ ಸ್ವಾಧೀನವಾಗಿದೆ. ಅದು ಮೂಲಸೌಕರ್ಯ ಮತ್ತು ಸಾಮಗ್ರಿಗಳ ಕ್ಷೇತ್ರದಲ್ಲಿ ಭಾರತದ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆಯೂ ಆಗಿದೆ.

2030ರ ವೇಳೆಗೆ ಅದಾನಿ ಗ್ರೂಪ್ ಸಿಮೆಂಟ್‌ನ ಅತ್ಯಂತ ಬೃಹತ್ ಮತ್ತು ಸಮರ್ಥ ಉತ್ಪಾದಕನಾಗುವ ಬಗ್ಗೆ ಗೌತಮ್ ಅದಾನಿ ವಿಶ್ವಾಸ ವ್ಯಕ್ತಪಡಿಸಿದರು.

ಹೋಲ್ಸಿಮ್ ಲಿಮಿಟೆಡ್‌ನ ಹೆಚ್ಚಿನ ಭಾರತೀಯ ಕಾರ್ಯಾಚರಣೆಗಳನ್ನು ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅದಾನಿ ಗ್ರೂಪ್ ಮೇ ತಿಂಗಳಿನಲ್ಲಿ ಪ್ರಕಟಿಸಿತ್ತು.

ಇದನ್ನೂ ಓದಿ: ಬಹುನಿರೀಕ್ಷಿತ 'ಕಬ್ಜಾ' ಚಿತ್ರದ ಟೀಸರ್‌ ಬಿಡುಗಡೆ: ಕೆಜಿಎಫ್‌ ನೆರಳನ್ನು ಗುರುತಿಸಿದ ನೆಟ್ಟಿಗರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News