ಈಸ್ಟರ್ ಬಾಂಬ್ ದಾಳಿ ಪ್ರಕರಣದಲ್ಲಿ ಮಾಜಿ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಶಂಕಿತ ಆರೋಪಿ

Update: 2022-09-17 17:03 GMT

ಕೊಲಂಬೊ,ಸೆ.17: 2019ರಲ್ಲಿ ಶ್ರೀಲಂಕಾದ ಚರ್ಚ್‌ಗಳಲ್ಲಿ ನಡೆದ ಈಸ್ಟರ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಶಂಕಿತ ಆರೋಪಿಯೆಂದು ಶ್ರೀಲಂಕಾದ ನ್ಯಾಯಾಲಯವು ಶುಕ್ರವಾರ ಘೋಷಿಸಿದೆ ಹಾಗೂ ಈ ವರ್ಷದ ಆಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಿದೆ.

    ಈಸ್ಟರ್ ಸಂಡೇ ಬಾಂಬ್ ದಾಳಿಯ ಸಂತ್ರಸ್ತರಿಗೆ ನ್ಯಾಯಕ್ಕಾಗಿ ರಾಷ್ಟ್ರೀಯ ಕೆಥೋಲಿಕ್ ಸಮಿತಿಯ ಸದಸ್ಯರಾದ ಫಾ. ಸಿರಿಲ್ ಗಾಮಿನಿ ಫೆರ್ನಾಂಡೊ ಅವರು ಸಲ್ಲಿಸಿದ ಖಾಸಗಿ ಅರ್ಜಿಯ ವಿಚಾರಣೆಗೆ ಸಂಬಂಧಿಸಿ ಕೊಲಂಬೊದ ಕೋಟೆ ಪ್ರದೇಶದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

 ಈಸ್ಟರ್‌ಬಾಂಬ್ ದಾಳಿಯು ಚುನಾವಣಾ ಅಥವಾ ರಾಜಕೀಯ ದುರುದ್ದೇಶದಿಂದ ನಡೆಸಲಾದ ಒಂದು ದೊಡ್ಡ ರಾಜಕೀಯ ಸಂಚಾಗಿತ್ತೆಂದು  ಈ ವರ್ಷದ ಮಾರ್ಚ್‌ನಲ್ಲಿ ಕೊಲಂಬೊದ ಆರ್ಚ್‌ಬಿಷಪ್ ಮಾಲ್ಕಮ್ ರಂಜಿತ್ ಅವರು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯ ಮುಂದೆ ನೀಡಿದ ಹೇಳಿಕೆಯೊಂದರಲ್ಲಿ ಆರೋಪಿಸಿದ್ದರು.

   2019ರ ಈಸ್ಟರ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಿರಿಸೇನಾ ಅವರ ವಿರುದ್ಧ ಆರೋಪ ಕೇಳಿಬಂದಿರುವುದು ಇದು ಮೊದಲೇನಲ್ಲ. ದಾಳಿ ನಡೆದ ಸಮಯದಲ್ಲಿ ಸಿರಿಸೇನಾ ಅವರು ಶ್ರೀಲಂಕಾದ ಅಧ್ಯಕ್ಷರಾಗಿದ್ದರು. 200ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಈ ದಾಳಿ ಪ್ರಕರಣದ ತನಿಖೆಗಾಗಿ 2019ರ ಮೇನಲ್ಲಿ ನೇಮಕಗೊಂಡ ಸಂಸದೀಯ ಸಮಿತಿಯು ಸಲ್ಲಿಸಿದ ವರದಿಯೊಂದು,  ಅಧ್ಯಕ್ಷ ಸಿರಿಸೇನಾ ಅವರು ಬಾಂಬ್ ದಾಳಿಗಳಿಗೆ ಮುನ್ನ ಆಡಳಿತ ಯಂತ್ರ ಹಾಗೂ ಭದ್ರತಾ ವ್ಯವಸ್ಥೆಗನ್ನು ದುರ್ಬಲಗೊಳಿಸಿದ್ದುದೇ ಗಂಭೀರವಾದ ಪ್ರಮಾದಗಳಿಗೆ ಕಾರಣವಾಯಿತು ಎಂದು ಹೇಳಿತ್ತು. ಈಸ್ಟರ್ ದಾಳಿಯನ್ನು ತಡೆಯಲು ವಿಫಲರಾದುದಕ್ಕಾಗಿ ಸಿರಿಸೇನಾ ಹಾಗೂ ಅವರ ಗುಪ್ತಚರದಳದ ವರಿಷ್ಠರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು 2021ರ ಫೆಬ್ರವರಿಯಲ್ಲಿ ಅಧ್ಯಕ್ಷೀಯ ತನಿಖಾ ಆಯೋಗವು ಶಿಫಾರಸು ಮಾಡಿತ್ತು.

 2019ರಲ್ಲಿ ಶ್ರೀಲಂಕಾದ ಚರ್ಚ್‌ಗಳಲ್ಲಿ ಈಸ್ಚರ್ ಹಬ್ಬದ ಪ್ರಾರ್ಥನೆಯ ಸಂದರ್ಭ ನಡೆದ ಭೀಕರ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 280 ಮಂದಿ ಸಾವನ್ನಪ್ಪಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News