ಚೀನಾ: ಭೀಕರ ರಸ್ತೆ ಅಪಘಾತದಲ್ಲಿ 27 ಮಂದಿ ಬಲಿ

Update: 2022-09-18 17:25 GMT
Photo:PTI

ಬೀಜಿಂಗ್, ಸೆ.18: ನೈಋತ್ಯ ಚೀನಾದಲ್ಲಿ ರವಿವಾರ ಬೆಳಿಗ್ಗೆ ಸಂಭವಿಸಿದ ಬಸ್ಸು ಅಪಘಾತದಲ್ಲಿ 27 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪರ್ವತ ಪ್ರದೇಶವಾದ ಗೈರೌ ಪ್ರಾಂತದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ಸು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ 47 ಪ್ರಯಾಣಿಕರಿದ್ದು 27 ಮಂದಿ ಮೃತಪಟ್ಟಿದ್ದಾರೆ. ಉಳಿದ 20 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಡು ಕೌಂಟಿ ಪೊಲೀಸರು ಹೇಳಿದ್ದಾರೆ.

ಗೈರೌ ಪ್ರಾಂತದಲ್ಲಿ ಅತ್ಯಧಿಕ ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿದ್ದು, ಈ ಬಸ್ಸಿನಲ್ಲಿದ್ದವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿತ್ತು ಎಂದು ಅನಧಿಕೃತ ಮೂಲವನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಮಧ್ಯೆ, ಈ ತಿಂಗಳ ಆರಂಭದಲ್ಲಿ ಹೆಬೈ ಪ್ರಾಂತದಲ್ಲಿ ಕಬ್ಬಿಣದ ಅದಿರಿನ ಗಣಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ 14 ಮಂದಿ ಮೃತಪಟ್ಟಿರುವ ಬಗ್ಗೆ ತಡವಾಗಿ ಮಾಹಿತಿ ಲಭಿಸಿದೆ. ಸೆಪ್ಟಂಬರ್ 2ರಂದು ಸಂಭವಿಸಿದ ದುರಂತದಲ್ಲಿ 14 ಮಂದಿ ಮೃತಪಟ್ಟಿದ್ದು ಒಬ್ಬ ನಾಪತ್ತೆಯಾಗಿರುವ ಮಾಹಿತಿ ಲಭಿಸಿದ ತಕ್ಷಣ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಾಂಗ್‌ಶಾನ್ ನಗರಾಡಳಿತದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News