ಉಕ್ರೇನ್‌ನಲ್ಲಿ ಪರಮಾಣು ಅಸ್ತ್ರ ಬಳಸದಂತೆ ಪುಟಿನ್‌ಗೆ ಜೋ ಬೈಡನ್ ಎಚ್ಚರಿಕೆ

Update: 2022-09-18 15:50 GMT
ಜೋ ಬೈಡನ್-ವ್ಲಾದಿಮಿರ್ ಪುಟಿನ್

ವಾಷಿಂಗ್ಟನ್, ಸೆ.18: ಉಕ್ರೇನ್‌ನಲ್ಲಿ ಹಿನ್ನಡೆಯ ಹಿನ್ನೆಲೆಯಲ್ಲಿ ಯುದ್ಧತಂತ್ರದ ಪರಮಾಣು ಅಥವಾ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಆಗ್ರಹಿಸಿದ್ದಾರೆ.

 ಉಕ್ರೇನ್ ಸೇನೆ ಈ ವಾರ ದೇಶದ ಈಶಾನ್ಯದಲ್ಲಿ ನಡೆಸಿದ ಮಿಂಚಿನ ಪ್ರತಿದಾಳಿಯಲ್ಲಿ ರಶ್ಯ ಪಡೆಯನ್ನು ಹಿಮ್ಮೆಟ್ಟಿಸಿರುವುದರಿಂದ , ಮತ್ತೆ ಮೇಲುಗೈ ಸಾಧಿಸಲು ಗರಿಷ್ಠ ಕ್ರಮ ಕೈಗೊಳ್ಳುವಂತೆ ಪುಟಿನ್ ಮೇಲೆ ಸ್ವದೇಶದಲ್ಲಿ ಒತ್ತಡ ಹೆಚ್ಚಿದೆ. ತಮ್ಮ ಪಡೆಯ ಮೇಲೆ ಮತ್ತಷ್ಟು ಒತ್ತಡ ಹೇರಿದರೆ ಇನ್ನಷ್ಟು ಉಗ್ರವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಪುಟಿನ್ ಎಚ್ಚರಿಕೆ ನೀಡಿರುವುದು ಸಣ್ಣ ರಾಸಾಯನಿಕ ಅಥವಾ ಪರಮಾಣು ಅಸ್ತ್ರಗಳಂತಹ ಅಸಾಂಪ್ರದಾಯಿಕ ವಿಧಾನಗಳನ್ನು ರಶ್ಯ ಬಳಸಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.

 ಈ ಹಿನ್ನೆಲೆಯಲ್ಲಿ, ಒಂದು ವೇಳೆ ಪುಟಿನ್ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರೆ ಅವರಿಗೆ ಏನು ಹೇಳುತ್ತೀರಿ ಎಂದು ಸಿಬಿಎಸ್ ನ್ಯೂಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಡನ್ ‘ ಬೇಡ, ಬೇಡ, ಬೇಡ. ಇದು ಎರಡನೆಯ ಮಹಾಯುದ್ಧದ ನಂತರದ ಯುದ್ಧದ ಚಹರೆಯನ್ನು ಬದಲಾಯಿಸುತ್ತದೆ’ ಎಂದರು. ರಶ್ಯ ಪರಮಾಣು ಶಸ್ತ್ರ ಬಳಸಿದರೆ ಅಮೆರಿಕದ ಪ್ರತಿಕ್ರಿಯೆ ಪರಿಣಾಮಕಾರಿಯಾಗಿರುತ್ತದೆ. ರಶ್ಯ ಜಾಗತಿಕ ವೇದಿಕೆಯಲ್ಲಿ ಈ ಹಿಂದಿಗಿಂತಲೂ ಒಬ್ಬಂಟಿಯಾಗಲಿದೆ. ಅವರು ಏನು ಮಾಡುತ್ತಾರೆ ಎಂಬುದರ ಮೇಲೆ ಪ್ರತಿಕ್ರಿಯೆ ನಿರ್ಧರಿತವಾಗಲಿದೆ ಎಂದು ಬೈಡನ್ ಹೇಳಿದರು.

ಉಕ್ರೇನ್ ವಿರುದ್ಧದ ‘ವಿಶೇಷ ಸೇನಾ ಕಾರ್ಯಾಚರಣೆ’ಯಲ್ಲಿ ಪಾಶ್ಚಿಮಾತ್ಯ ದೇಶಗಳು ಮಧ್ಯಪ್ರವೇಶಿಸಿದರೆ ಪರಮಾಣು ಅಸ್ತ್ರ ಬಳಸಲೂ ಹಿಂಜರಿಯುವುದಿಲ್ಲ ಎಂದು ಈ ಹಿಂದೆಯೇ ಪುಟಿನ್ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News