ಆಗ್ನೇಯ ತೈವಾನ್‌ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ ನೀಡಿದ ಜಪಾನ್

Update: 2022-09-18 17:22 GMT
PHOTO: TWITTER

ತೈಪೆ, ಸೆ.18: ರವಿವಾರ ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಭೂಕಂಪದ ತೀವ್ರತೆಯನ್ನು ಗಮನಿಸಿದ ಜಪಾನ್ ಸುನಾಮಿಯ ಎಚ್ಚರಿಕೆ ಜಾರಿಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ಹೇಳಿದೆ. ತೈತುಂಗ್ ನಗರದ ಸುಮಾರು 50 ಕಿಮೀ ಉತ್ತರದಲ್ಲಿ , 10 ಕಿ.ಮೀ ಆಳದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 2:44 ಗಂಟೆಗೆ ಭೂಕಂಪ ಸಂಭವಿಸಿದೆ. ಯೂಲಿ ನಗರದಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಒಂದು ಕಟ್ಟಡ ಕುಸಿದು ಬಿದ್ದಿದೆ. ರಾಜಧಾನಿ ತೈಪೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ . ಇದರ ಬೆನ್ನಲ್ಲೇ, ತೈವಾನ್ ಬಳಿಯ ತನ್ನ ದ್ವೀಪಗಳಿಗೆ ಜಪಾನ್ ಸುನಾಮಿಯ ಎಚ್ಚರಿಕೆ ರವಾನಿಸಿದೆ ಎಂದು ತೈವಾನ್‌ನ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ತೈವಾನ್ ಬಳಿಕ ಚೀನಾದ ಕರಾವಳಿ ಪ್ರದೇಶಗಳಾದ ಫುಜಿಯಾನ್, ಗ್ವಾಂಗ್‌ಡಾಂಗ್, ಜಿಯಾಂಗ್ಸು ಮತ್ತು ಶಾಂಘೈಯಲ್ಲೂ ಭೂಮಿ ನಡುಗಿದೆ ಎಂದು ವರದಿಯಾಗಿದೆ. ಸಮುದ್ರದಲ್ಲಿ ಸುಮಾರು 1 ಮೀಟರ್ ಎತ್ತರಕ್ಕೆ ಅಲೆಗಳು ಎದ್ದಿದ್ದವು ಎಂದು ವರದಿಯಾಗಿದೆ. ತೈವಾನ್‌ನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ಇದ್ದಕ್ಕಿದ್ದಂತೆಯೇ ಅತ್ತಿಂದಿತ್ತ ವಾಲಾಡಿದ ವೀಡಿಯೊವನ್ನು ಎನ್‌ಡಿಟಿವಿ ಪತ್ರಕರ್ತ ಉಮಾಶಂಕರ್ ಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಇದೇ ಪ್ರದೇಶದಲ್ಲಿ ಶನಿವಾರ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು ಹಾಗೂ ಬಳಿಕ ಹಲವು ಪಶ್ಚಾತ್ ಕಂಪನಗಳು ಸಂಭವಿಸಿದ್ದರಿಂದ ಜನತೆ ಭೀತಿಗೊಂಡು ಮನೆಯಿಂದ ಹೊರಗೋಡಿ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News