ಪಾಕಿಸ್ತಾನದಲ್ಲಿ ರೋಗ, ಸಾವಿನ ಅಲೆ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2022-09-18 16:08 GMT

ಇಸ್ಲಾಮಾಬಾದ್, ಸೆ.18: ಪಾಕಿಸ್ತಾನದಲ್ಲಿ ವಿನಾಶಕಾರಿ ಪರಿಣಾಮಕ್ಕೆ ಕಾರಣವಾದ ಭೀಕರ ಪ್ರವಾಹದ ಬಳಿಕ ಇದೀಗ ಆ ದೇಶ 2ನೇ ದುರಂತದ ಹೊಸ್ತಿಲಲ್ಲಿದೆ. ಅಲ್ಲಿ ಈಗ ರೋಗ ಹಾಗೂ ಸಾವಿನ ಅಲೆಯ ಭೀತಿ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.

‘ಸಾವಿನ ಅಲೆ’ಯ ಹಿನ್ನೆಲೆಯಲ್ಲಿ ದೇಶದ ಬಹುತೇಕ ಆರೋಗ್ಯ ಕೇಂದ್ರಗಳು ನೆರೆ ನೀರಲ್ಲಿ ಮುಳುಗಿದ್ದು ಆರೋಗ್ಯ ಸೇವೆ ಪೂರೈಕೆಗೆ ಅಡ್ಡಿಯಾಗಿದೆ. ಹಲವಾರು ಮಂದಿ ತಮ್ಮ ಮನೆ ತೊರೆದು ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ರವಾಹ ದುರಂತದ ಬಳಿಕ , ಲಕ್ಷಾಂತರ ಬಡ ಮತ್ತು ದುರ್ಬಲ ಜನರಿಗೆ ಅತೀ ಹೆಚ್ಚಿನ ಪರಿಣಾಮ ಬೀರಲಿರುವ ರೋಗಗಳು ಹಾಗೂ ಸಾವಿನ ಅಲೆಯ ಮತ್ತೊಂದು ದುರಂತದ ಅಪಾಯದ ಬಗ್ಗೆ ಆತಂಕಗೊಂಡಿದ್ದೇನೆ ಎಂದು ಘೆಬ್ರಯೇಸಸ್ ಹೇಳಿದ್ದಾರೆ.

 ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರಿಂದ ಜನತೆ ಅಸುರಕ್ಷಿತ ನೀರನ್ನು ಕುಡಿಯುವ ಅನಿವಾರ್ಯತೆಯಿದೆ. ಇದು ಕಾಲೆರಾ ಮತ್ತಿತರ ಅತಿಸಾರ ಕಾಯಿಲೆ ಹರಡುವುದಕ್ಕೆ ಕಾರಣವಾಗಬಹುದು. ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿರುವ ನೀರು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಲೇರಿಯಾ, ಡೆಂಗ್ಯೂ ಮುಂತಾದ ವಾಹಕಗಳಿಂದ ಹರಡುವ ರೋಗಗಳನ್ನು ಪ್ರಸಾರಿಸಬಹುದು . ಪಾಕಿಸ್ತಾನದಲ್ಲಿನ ದುರಂತ ಪ್ರವಾಹ ಹೆಚ್ಚು ಅಸುರಕ್ಷಿತ ಜನನ, ಮಧುಮೇಹ ಅಥವಾ ಹೃದ್ರೋಗಕ್ಕೆ ಚಿಕಿತ್ಸೆಯ ಅಲಭ್ಯತೆ ಹಾಗೂ ಅತ್ಯಧಿಕ ಮಕ್ಕಳನ್ನು ಲಸಿಕೆಯಿಂದ ವಂಚಿತಗೊಳಿಸಬಹುದು ಎಂದವರು ಹೇಳಿದ್ದಾರೆ.

ಈ ಮಧ್ಯೆ, ಕೊಳಕು ನೀರಿನಿಂದ ಅಪಾಯಗಳನ್ನು ಕಡಿಮೆ ಮಾಡಲು ಸುರಕ್ಷಿತ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಪಾಕ್ ಸರಕಾರ ಹೇಳಿದೆ.

2,000 ಆರೋಗ್ಯ ಕೇಂದ್ರಗಳಿಗೆ ಹಾನಿ

ವಿನಾಶದ ನಡುವೆ ಪಾಕಿಸ್ತಾನದ ಆರೋಗ್ಯ ಕಾರ್ಯಕರ್ತರು ಪ್ರಮುಖ ಆರೋಗ್ಯ ಸೇವೆಯನ್ನು ಜನತೆಗೆ ತಲುಪಿಸಲು ತಮ್ಮ ಗರಿಷ್ಠ ಪ್ರಯತ್ನ ನಡೆಸುತ್ತಿದ್ದಾರೆ. ದೇಶದ ಸುಮಾರು 2,000 ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು ಕೆಲವು ಸಂಪೂರ್ಣ ನಾಶವಾಗಿದೆ. ಪಾಕಿಸ್ತಾನದ ಸರಕಾರ, ವಿಶ್ವಸಂಸ್ಥೆ ಮತ್ತು ಎನ್‌ಜಿಒ ನೆರವಿನೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಕೀಯ ಶಿಬಿರಗಳನ್ನು ವ್ಯವಸ್ಥೆ ಮಾಡಿದೆ. ಆರೋಗ್ಯ ಸಂಸ್ಥೆಗಳಿಗೆ ಔಷಧ ಹಾಗೂ ಇತರ ವ್ಯವಸ್ಥೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅತಿಸಾರ ರೋಗಗಳನ್ನು ನಿಯಂತ್ರಿಸಲು ನೀರಿನ ಶುದ್ಧೀಕರಣ ಕಿಟ್‌ಗಳು ಹಾಗೂ ಮೌಖಿಕ ಪುನರ್ಜಲೀಕರಣ ಲವಣಗಳನ್ನು ಒದಗಿಸಿದೆ ಎಂದು ಘೆಬ್ರಯೇಸಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News