ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

Update: 2022-09-19 02:14 GMT
(Twitter Photo)

ಬೆಲ್ಗ್ರೇಡ್ (ಸೈಬೀರಿಯಾ): ಭಾರತದ ಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾ, ವಿಶ್ವ ಕುಸ್ತಿ ಚಾಂಪಿಯನ್ ಶಿಪ್‍ನಲ್ಲಿ ರವಿವಾರ ಕಂಚಿನ ಪದಕ ಗೆದ್ದರು. ಈ ಮೂಲಕ ವಿಶ್ವ ಚಾಂಪಿಯನ್‍ ಶಿಪ್‍ನಲ್ಲಿ ನಾಲ್ಕು ಪದಕ ಗೆದ್ದ ಭಾರತದ ಏಕೈಕ ಕುಸ್ತಿಪಟು ಎಂಬ ಇತಿಹಾಸ ಸೃಷ್ಟಿಸಿದರು.

ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದಿದ್ದ ಬಜರಂಗ್, ಬೆಲ್ಗ್ರೇಡ್ ಕೂಟದ ಕಂಚಿನ ಪದಕದ ಹೋರಾಟದಲ್ಲಿ ಪೋರ್ಟೊರಿಕಾದ ಸೆಬಾಸ್ಟಿಯನ್ ಸಿ ರಿವೇರಾ ವಿರುದ್ಧ 11-9 ಅಂಕಗಳಿಂದ ಗೆಲುವು ಸಾಧಿಸಿದರು.

ಕ್ವಾರ್ಟರ್ ಫೈನಲ್‍ನಲ್ಲಿ ಅಮೆರಿಕದ ಜಾನ್ ಮೈಕೆಲ್ ವಿರುದ್ಧ ಸೋಲು ಅನುಭವಿಸಿದ್ದ ಬಜರಂಗ್, ರೆಪೆಚೇಜ್ ಸುತ್ತಿನಲ್ಲಿ ಅರ್ಮೇನಿಯಾದ ವೆಜೆನ್ ತೆವನ್ಯಾನ್ ಅವರನ್ನು 7-6 ಅಂಕಗಳಿಂದ ಸೋಲಿಸಿ ಕಂಚಿನ ಪದಕದ ಹೋರಾಟಕ್ಕೆ ಅರ್ಹತೆ ಸಂಪಾದಿಸಿದ್ದರು.

ಇದಕ್ಕೂ ಮುನ್ನ ಪೂನಿಯಾ, 2013ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಹಾಗೂ 2019ರಲ್ಲಿ ಕಂಚಿನ ಪದಕ ಗೆದ್ದಿದ್ದರು. 30 ಮಂದಿಯ ಭಾರತೀಯ ಕುಸ್ತಿ ತಂಡ ಈ ವಿಶ್ವಚಾಂಪಿಯನ್‍ ಶಿಪ್‍ನಲ್ಲಿ ನಿರೀಕ್ಷಿತ ಸಾಧನೆ ತೋರಲು ವಿಫಲವಾಗಿದ್ದು, ಕೇವಲ ಎರಡು ಪದಕಗಳಿಗೆ ತೃಪ್ತಿಪಟ್ಟುಕೊಂಡಿದೆ.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿಕುಮಾರ್ ದಾಹಿಯಾ ಆರಂಭಿಕ ಸುತ್ತಿನಲ್ಲೇ ಸೋಲು ಅನುಭವಿಸಿದ್ದರು. ಬಜರಂಗ್ ಅವರನ್ನು ಹೊರತುಪಡಿಸಿ ವಿನೇಶ್ ಪೊಗಾಟ್ 53 ಕೆ.ಜಿ. ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News