ಪ್ರಶಸ್ತಿ ನೀಡುವಾಗ ಫೋಟೊಕ್ಕಾಗಿ ಫುಟ್ಬಾಲ್ ಸ್ಟಾರ್ ಸುನೀಲ್ ಛೆಟ್ರಿಯನ್ನು ತಳ್ಳಿದ ಪ.ಬಂಗಾಳದ ರಾಜ್ಯಪಾಲ!

Update: 2022-09-19 07:30 GMT

ಹೊಸದಿಲ್ಲಿ: ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ(Durand Cup Football Tournament) ಸುನೀಲ್ ಛೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ 2-1 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಆದಾಗ್ಯೂ, ಪಂದ್ಯದ ನಂತರದ ಕೆಲವು ಅಹಿತಕರ ಕ್ಷಣಗಳ ಎರಡು ವೀಡಿಯೊಗಳು ರೋಮಾಂಚಕ ಫುಟ್ಬಾಲ್ ಆಟಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿವೆ.

ಮೊದಲ ವೀಡಿಯೊದಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ (West Bengal Governor La Ganesan )ಅವರು ಪಂದ್ಯದ ನಂತರದ ಪ್ರಶಸ್ತಿ  ಸಮಾರಂಭದಲ್ಲಿ ಫೋಟೋ ಅವಕಾಶಕ್ಕಾಗಿ ಸುನೀಲ್ ಛೆಟ್ರಿಯನ್ನು (Sunil Chhetri)ದೂರ ತಳ್ಳಿರುವುದು ಕಂಡುಬಂದಿದೆ.

ಎರಡನೇ ವೀಡಿಯೊದಲ್ಲಿ, ಫೈನಲ್ ಪಂದ್ಯದಲ್ಲಿ ಗೋಲು ಗಳಿಸಿದ ಶಿವಶಕ್ತಿ ನಾರಾಯಣನ್ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮತ್ತೊಬ್ಬ ಅತಿಥಿ ಪಕ್ಕಕ್ಕೆ ತಳ್ಳಿರುವುದು ಕಂಡುಬಂದಿದೆ.

ಟ್ರೋಫಿಗಳನ್ನು ಪ್ರದಾನಿಸಲು ಬಂದ ಅತಿಥಿಗಳು ಕ್ರೀಡಾಪಟುಗಳಿಗಿಂತ ಹೆಚ್ಚು ಗಮನ ಸೆಳೆಯಲು ಉತ್ಸುಕರಾಗಿದ್ದಾರೆ ಎನ್ನುವುದು ಈ ಎರಡು ವೀಡಿಯೊಗಳು ತೋರಿಸುತ್ತಿವೆ.

40,000 ಕ್ಕೂ ಹೆಚ್ಚು ಜನರು ವೀಡಿಯೊಗಳನ್ನು ವೀಕ್ಷಿಸಿದ್ದಾರೆ ಹಾಗೂ  ಅನೇಕ ಫುಟ್ಬಾಲ್ ಅಭಿಮಾನಿಗಳು ಇದರಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಭಾರತದ ಅಗ್ರ ಫುಟ್ಬಾಲ್ ಆಟಗಾರರೊಂದಿಗೆ ದುರ್ವರ್ತನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು "ಅತ್ಯಂತ ಅವಮಾನಕರ" ಎಂದು ಕರೆದಿದ್ದಾರೆ.

"ರಾಜಕಾರಣಿಗಳು ಭಾರತದ ನೈಜ ಹಾಗೂ  ಯುವ ಪ್ರತಿಭೆಗಳ ಮುಂದೆ ನಿಲ್ಲಲು ಬಯಸುತ್ತಾರೆ" ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.

"ಈ ರಾಜಕಾರಣಿಗಳು ತಾವು ಏನೆಂದು ತಿಳಿದುಕೊಂಡಿದ್ದಾರೋ ಎಂದು ಗೊತ್ತಿಲ್ಲ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಯುವ ಆಟಗಾರ  ಎನ್. ಶಿವಶಕ್ತಿ ಹಾಗೂ ಅಲನ್ ಕೋಸ್ಟಾ ಮೊದಲ ಹಾಗೂ  ದ್ವಿತೀಯಾರ್ಧದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ  ಡುರಾಂಡ್ ಕಪ್ ಫೈನಲ್‌ನಲ್ಲಿಜಯ ಸಾಧಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News