ಸೆಪ್ಟಿಕ್ ಟ್ಯಾಂಕ್‌ನಿಂದ ಹೊರಹೊಮ್ಮಿದ ವಿಷಾನಿಲ: ಮೂವರು ಕಾರ್ಮಿಕರು ಮೃತ್ಯು
ಕಾನ್ಪುರ(ಉ.ಪ್ರ),ಸೆ.19: ಇಲ್ಲಿಯ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಬಳಕೆಯಲ್ಲಿರದ ಸೆಪ್ಟಿಕ್ ಟ್ಯಾಂಕ್‌ನ(septic tank) ಶಟರ್‌ನ್ನು ತೆಗೆಯುತ್ತಿದ್ದಾಗ ಅದರಿಂದ ಹೊರಹೊಮ್ಮಿದ ವಿಷಾನಿಲವನ್ನು ಸೇವಿಸಿ ಸಾವನ್ನಪ್ಪಿದ್ದಾರೆ.
ಬಿಧ್ನು ನಿವಾಸಿಗಳಾದ ಶಿವ ತಿವಾರಿ (25),ಅಂಕಿತ್ ಪಾಲ್ (22) ಮತ್ತು ಕಾನ್ಪುರದ ನುರ್ವಾಲ್ ನಿವಾಸಿ ಅಮಿತ್ ಕುಮಾರ್ (25) ಸೆಪ್ಟಿಕ್ ಟ್ಯಾಂಕ್‌ನ್ನು ಪ್ರವೇಶಿಸಿದ ತಕ್ಷಣ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಕಟ್ಟಡ ನಿರ್ಮಾಣ ಕೆಲಸಕ್ಕೆ ಅವರನ್ನು ನೇಮಿಸಿಕೊಂಡಿದ್ದ ಗುತ್ತಿಗೆದಾರ ಬಾಲಗೋವಿಂದ ಅವನ್ನು ರಕ್ಷಿಸಲು ಪ್ರಯತ್ನಿಸಿದ್ದನಾದರೂ ಉಸಿರಾಟದ ಸಮಸ್ಯೆಯನ್ನು ಎದುರಿಸಿದ್ದ. ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಕಾರ್ಮಿಕರನ್ನು ಟ್ಯಾಂಕ್‌ನಿಂದ ಹೊರತೆಗೆದಾಗ ಶಿವ ತಿವಾರಿ ಅದಾಗಲೇ ಮೃತಪಟ್ಟಿದ್ದ. ಉಳಿದ ಇಬ್ಬರು ರಿಜೆನ್ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ತಿಳಿಸಿದರು.
ಮೃತರ ಕುಟುಂಬಗಳು ಬಯಸಿದರೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವದು ಎಂದರು.
ಇದನ್ನೂ ಓದಿ: ಸುಸೈಡ್ ನೋಟ್ ನಲ್ಲಿ ಪ್ರಧಾನಿಯನ್ನು ದೂರಿ ರೈತ ಆತ್ಮಹತ್ಯೆ