ಸುಸೈಡ್ ನೋಟ್ ನಲ್ಲಿ ಪ್ರಧಾನಿಯನ್ನು ದೂರಿ ರೈತ ಆತ್ಮಹತ್ಯೆ

ಪುಣೆ: ಪ್ರಧಾನಿ ನರೇಂದ್ರ ಮೋದಿಗೆ(PM Narendra Modi) ಹುಟ್ಟುಹಬ್ಬದ ಶುಭಾಶಯ ಕೋರಿ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಸಮಸ್ಯೆಗೆ ಅವರನ್ನು ದೂರಿ ಸುಸೈಡ್ ನೋಟ್ ಬರೆದಿಟ್ಟು ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ವಡಗಾಂವ್ ಆನಂದ್ ಗ್ರಾಮದ 45 ವರ್ಷದ ರೈತನೊಬ್ಬ(Farmer) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು indianexpress ವರದಿ ಮಾಡಿದೆ.
ಮೃತ ರೈತನನ್ನು ದಶರಥ್ ಲಕ್ಷ್ಮಣ್ ಕೇದಾರಿ ಎಂದು ಗುರುತಿಸಲಾಗಿದೆ. ತಾನು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕದೇ ಇರುವ ಕುರಿತಂತೆ ಹಾಗೂ ಸಾಲ ವಸೂಲಾತಿ ಏಜಂಟರಿಂದ ಕಿರುಕುಳದ ಬಗ್ಗೆ ರೈತ ತನ್ನ ಸುಸೈಡ್ ನೋಟಿನಲ್ಲಿ ಬರೆದಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ರೈತರ ಸಮಸ್ಯೆ ಕಡೆಗಣಿಸಿದ್ದಕ್ಕಾಗಿ ಆತ ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರವನ್ನೂ ದೂರಿದ್ದಾನೆ. ಮೋದಿ ಸಮಸ್ಯೆ ಪರಿಹರಿಸಲು ಏನೂ ಕ್ರಮಕೈಗೊಂಡಿಲ್ಲ ಎಂದೂ ಆತ ಸುಸೈಡ್ ನೋಟಿನಲ್ಲಿ ಆರೋಪಿಸಿದ್ದಾನೆ.
"ನಮ್ಮ ಬಳಿ ಹಣವಿಲ್ಲ, ಸಾಲ ನೀಡಿದವರು ಕಾಯಲು ಸಿದ್ಧರಿಲ್ಲ. ನಾವೇನು ಮಾಡಬೇಕು. ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲೂ ನಮಗೆ ಸಾಧ್ಯವಾಗುತ್ತಿಲ್ಲ. ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಮೋದಿ ಸಾಹೇಬ್. ನೀವು ನಮ್ಮ ಉತ್ಪನ್ನಗಳಿಗೆ ಖಾತರಿ ಬೆಲೆ ನೀಡಬೇಕು. ಕೃಷಿ ಕ್ಷೇತ್ರದ ಮೇಲೆ ನಿಮಗೆ ನಿಯಂತ್ರಣವಿಲ್ಲ. ರೈತರೇನು ಮಾಡಬೇಕು? ಸಾಲ ನೀಡಿದವರು ಬೆದರಿಸುತ್ತಿದ್ದಾರೆ. ಸಹಕಾರಿ ಸಂಘದ ಅಧಿಕಾರಿಗಳು ನಿಂದಿಸುತ್ತಾರೆ. ನಮಗೆ ಎಲ್ಲಿ ನ್ಯಾಯ ದೊರಕುವುದು? ನೀವು ಕ್ರಮಕೈಗೊಳ್ಳದೇ ಇರುವುದರಿಂದ ಇಂದು ನನಗೆ ಆತ್ಮಹತ್ಯೆಯಲ್ಲದೆ ಬೇರೆ ದಾರಿಯಿಲ್ಲ. ನಮ್ಮ ಬೆಳೆಗಳಿಗೆ, ನಮ್ಮ ಹಕ್ಕಾದ ಉತ್ತಮ ಬೆಲೆ ಒದಗಿಸಿ,'' ಎಂದು ರೈತ ತನ್ನ ಸುಸೈಡ್ ನೋಟಿನಲ್ಲಿ ಬರೆದಿದ್ದಾನೆ ಎಂದು ವರದಿಯಾಗಿದೆ.
ರೈತನ ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಿಲ್ಲಿಯ ಬಳಿಕ ಪಂಜಾಬ್ ನಲ್ಲೂ ಬಹುಮತದ ಸಾಬೀತಿಗೆ ಮುಂದಾದ ಆಪ್







