ಬಿಜೆಪಿಯೊಂದಿಗೆ ತನ್ನ ಪಕ್ಷವನ್ನು ವಿಲೀನಗೊಳಿಸಿದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

Update: 2022-09-19 16:08 GMT

ಅಮೃತಸರ್: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ, ಕ್ಯಾಪ್ಟನ್ ಅಮರಿಂದರ್ ಅವರು ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದ್ದಾರೆ. ಇಂದು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಕಿರಣ್ ರಿಜಿಜು ಅವರ ಸಮ್ಮುಖದಲ್ಲಿ ಸಿಂಗ್ ಬಿಜೆಪಿ ಸದಸ್ಯತ್ವ ಪಡೆದರು. ಅಮರಿಂದರ್ ಜೊತೆಗೆ ಅವರ ಅನೇಕ ಸಹಚರರು ಕೂಡ ಬಿಜೆಪಿ ಸೇರಿದರು.


ಬಿಜೆಪಿ ಸೇರಿದ ಬಳಿಕ‌ ಮಾತನಾಡಿದ ಅಮರಿಂದರ್ ಸಿಂಗ್, ಪಕ್ಷ ಸೇರ್ಪಡೆ ಕುರಿತು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಪಂಜಾಬ್‌ನ ಯಾವುದೇ ಭವಿಷ್ಯವನ್ನು ನೋಡಬೇಕಾದರೆ ನೀವು ಬಿಜೆಪಿಯೊಂದಿಗೆ ವಿಲೀನಗೊಳ್ಳಬೇಕು ಎಂದು ಇದರಲ್ಲಿ ನಿರ್ಧರಿಸಲಾಯಿತು. ನಮ್ಮ ಮತ್ತು ಬಿಜೆಪಿಯ ಸಿದ್ಧಾಂತ ಒಂದೇ ಎಂದು ಸಿಂಗ್ ಹೇಳಿದರು.

ನಾನು ಪಂಜಾಬ್‌ನಲ್ಲಿ 52 ವರ್ಷಗಳಿಂದ ರಾಜಕೀಯ ಮಾಡಿದ್ದೇನೆ ಎಂದು ಅಮರಿಂದರ್ ಹೇಳಿದ್ದಾರೆ. ಗಡಿ ರಾಜ್ಯವಾಗಿರುವುದರಿಂದ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಡ್ರೋನ್‌ಗಳು ಸಾಕಷ್ಟು ಬಂದಿವೆ. ಮೊದಲು ನಾಲ್ಕು ಕಿಲೋಮೀಟರ್ ಗಳಿಗೆ ಡ್ರೋನ್‌ ಬರುತ್ತಿತ್ತು, ಈಗ ನಲವತ್ತು ಕಿಲೋಮೀಟರ್ ವರೆಗೂ ಡ್ರೋನ್ ಗಳು ಬರುತ್ತಿದ್ದು, ಅದರಿಂದ ಆಯುಧಗಳು, ಡ್ರಗ್ಸ್ ಬರುತ್ತಿವೆ. ಇದು ಕಾಂಗ್ರೆಸ್ ಪಕ್ಷದ ತಪ್ಪು. ನಾವು ಎರಡು ದೇಶಗಳಿಂದ (ಚೀನಾ ಮತ್ತು ಪಾಕಿಸ್ತಾನ) ಸುತ್ತುವರೆದಿದ್ದೇವೆ ಎಂದು ಅಮರೀಂದರ್‌ ಸಿಂಗ್ ಹೇಳಿದರು. 

ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರನ್ನು ಪ್ರಶ್ನಿಸಿದ ಅಮರಿಂದರ್ ಸಿಂಗ್, ಸೇನೆಯ ಆಧುನೀಕರಣಕ್ಕೆ ಅವರು ಏನನ್ನೂ ಮಾಡಿಲ್ಲ ಎಂದು ಹೇಳಿದರು.

ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಅಮರಿಂದರ್ ಕಾಂಗ್ರೆಸ್ ತೊರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News