ಖೈದಿಗಳ ವಿನಿಮಯ ವ್ಯವಸ್ಥೆಯಡಿ ಅಮೆರಿಕಾದ ಇಂಜಿನಿಯರ್ ಬಿಡುಗಡೆ ಮಾಡಿದ ತಾಲಿಬಾನ್

Update: 2022-09-19 16:51 GMT

ಕಾಬೂಲ್, ಸೆ.19: ಖೈದಿಗಳ ವಿನಿಮಯ ವ್ಯವಸ್ಥೆಯಡಿ ಅಫ್ಘಾನಿಸ್ತಾನದ ತಾಲಿಬಾನ್ ತನ್ನ ವಶದಲ್ಲಿದ್ದ ಅಮೆರಿಕದ ಇಂಜಿನಿಯರ್ ಮಾರ್ಕ್ ಫ್ರೆರಿಚ್‍ರನ್ನು ಬಿಡುಗಡೆಗೊಳಿಸಿದ್ದು ಇದಕ್ಕೆ ಪ್ರತಿಯಾಗಿ ಅಮೆರಿಕ 2005ರಿಂದಲೂ ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ  ಬಂಧನದಲ್ಲಿದ್ದ ಅಫ್ಘಾನ್ ಬುಡಕಟ್ಟು ಮುಖಂಡ ಬಶೀರ್ ನೂರ್ಝಾಯಿಯನ್ನು ಬಿಡುಗಡೆಗೊಳಿಸಿದೆ ಎಂದು ತಾಲಿಬಾನ್‍ನ ವಿದೇಶಾಂಗ ಸಚಿವರು ಹೇಳಿದ್ದಾರೆ.

ಕಾಬೂಲ್‍ನ ವಿಮಾನ ನಿಲ್ದಾಣದಲ್ಲಿ ಖೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಅಫ್ಘಾನ್‍ನ ವಿದೇಶಾಂಗ ಸಚಿವ ಅಮೀರ್‍ಖಾನ್ ಮುತ್ತಖಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಅಮೆರಿಕ ಮತ್ತು ಯುರೋಪ್‍ಗೆ 50 ಮಿಲಿಯನ್ ಡಾಲರ್‍ಗೂ ಅಧಿಕ ಮೌಲ್ಯದ ಹೆರಾಯ್ನ್ ಅನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನೂರ್‍ಝಾಯಿಯನ್ನು 2005ರಲ್ಲಿ ಅಮೆರಿಕ ಬಂಧಿಸಿತ್ತು.

ಅಮೆರಿಕ ಸಹಿತ ಎಲ್ಲರ ಜತೆಗಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ್ ಸಿದ್ಧವಿದೆ ಎಂದು ಮುತ್ತಖಿ ಹೇಳಿದರು. ಇದೇ ಸಂದರ್ಭ ಮಾತನಾಡಿದ ನೂರ್‍ಝಾಯಿ `ನನ್ನ ಸಹೋದರರ ನಡುವೆ ನನ್ನ ದೇಶದ ರಾಜಧಾನಿಯಲ್ಲಿರಲು ಹೆಮ್ಮೆಯಾಗುತ್ತಿದೆ' ಎಂದರು. ನೂರ್‍ಝಾಯಿ ತಾಲಿಬಾನ್ ಜತೆ ನಿಕಟ ಬಾಂಧವ್ಯ ಹೊಂದಿದ್ದಾರೆ.

ಇಂಜಿನಿಯರ್ ಆಗಿದ್ದ ಫ್ರೆರಿಚ್ ಅಫ್ಘಾನ್‍ನಲ್ಲಿ ಹಲವು ವರ್ಷ ಅಮೆರಿಕದ ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಅವರನ್ನು ಫೆಬ್ರವರಿ 2020ರಲ್ಲಿ ಅಪಹರಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News