ಪರಮಾಣು ಒಪ್ಪಂದದ ಖಾತರಿಗೆ ಇರಾನ್ ಆಗ್ರಹ

Update: 2022-09-19 16:53 GMT

ಟೆಹ್ರಾನ್, ಸೆ.19: ಅಮೆರಿಕ ಮತ್ತೊಮ್ಮೆ ಹಿಂದೆ ಸರಿಯುವುದಿಲ್ಲ ಎಂದು ಖಾತರಿಪಡಿಸಿದರೆ ಪರಮಾಣು ಒಪ್ಪಂದದ ಮರುಸ್ಥಾಪನೆಯ ಬಗ್ಗೆ ಇರಾನ್ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪುನರುಚ್ಚರಿಸಿದ್ದಾರೆ.

2015ರ ಪರಮಾಣು ಒಪ್ಪಂದದ ಮರುಸ್ಥಾಪನೆಗೆ ಅಮೆರಿಕದಿಂದ ಸಶಕ್ತ ಖಾತರಿಯ ಅಗತ್ಯವಿದೆ ಎಂದು ಕಳೆದ ತಿಂಗಳು ಇರಾನ್ ವಿದೇಶಾಂಗ ಸಚಿವರು ಹೇಳಿದ್ದರು. ಅಲ್ಲದೆ,  ಇರಾನ್‍ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ರಾಜಕೀಯ ಪ್ರೇರಿತ ತನಿಖೆಯನ್ನು ಕೈಬಿಡುವಂತೆ ವಿಶ್ವಸಂಸ್ಥೆ ಪರಮಾಣು ನಿಗಾ ಸಂಸ್ಥೆಯನ್ನು ಆಗ್ರಹಿಸಿದ್ದರು.

ಇದು ಉತ್ತಮ ವ್ಯವಹಾರ, ನ್ಯಾಯಯುತ ಒಪ್ಪಂದವಾಗಿದ್ದರೆ ನಾವು ಒಪ್ಪಂದ  ಮಾಡಿಕೊಳ್ಳುವ  ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೇವೆ ಎಂದು ರೈಸಿ ಹೇಳಿದ್ದಾರೆ. ಈ ವಾರ ನ್ಯೂಯಾರ್ಕ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಒಪ್ಪಂದದ ವಿಷಯದಲ್ಲಿ ಮಾತನಾಡಿದ್ದ ರೈಸಿ` ಅದು ಶಾಶ್ವತವಾಗಿರಬೇಕು. ಖಾತರಿಗಳು ಇರಬೇಕು. ಖಾತರಿ ಇದ್ದರೆ ಅಮೆರಿಕ ಇಷ್ಟಬಂದಂತೆ ಒಪ್ಪಂದದಿಂದ ಹಿಂದೆ ಸರಿಯಲು ಸಾಧ್ಯವಾಗದು' ಎಂದಿದ್ದರು.

`ಒಪ್ಪಂದದ ವಾಗ್ದಾನವನ್ನು ಅಮೆರಿಕ ಉಲ್ಲಂಘಿಸಿದೆ. ಒಪ್ಪಂದದ ಪ್ರಕಾರ, ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಆರ್ಥಿಕ ನಿರ್ಬಂಧ ಅಂತ್ಯಗೊಳ್ಳಲು ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿರ್ಬಂಧಿಸಬೇಕಿತ್ತು. ನಾವು ಇದರಂತೆಯೇ ನಡೆದಿದ್ದೇವೆ. ಆದರೆ ಅಮೆರಿಕನ್ನರು ಏಕಪಕ್ಷೀಯವಾಗಿ ಒಪ್ಪಂದದಿಂದ ಹೊರಬರುವ ಘೋಷಣೆ ಮಾಡಿದರು. ಈಗ ಮತ್ತೊಮ್ಮೆ ಭರವಸೆ ನೀಡುವುದರಲ್ಲಿ ಅರ್ಥವಿಲ್ಲ. ಅಮೆರಿಕನ್ನರ ಧೋರಣೆ, ವರ್ತನೆಯನ್ನು ನಾವು ಈಗಾಗಲೇ ಅರ್ಥಮಾಡಿಕೊಂಡಿದ್ದೇವೆ, ಅವರ ಮೇಲೆ ವಿಶ್ವಾಸವಿಲ್ಲ. ಖಾತರಿ ಇಲ್ಲದಿದ್ದರೆ ವಿಶ್ವಾಸವಿಲ್ಲ' ಎಂದು ರೈಸಿ ಹೇಳಿದ್ದಾರೆ.

ಪರಮಾಣು ಒಪ್ಪಂದದ ಮರುಸ್ಥಾಪನೆಯ ಉದ್ದೇಶದ ಮಾತುಕತೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುತ್ತಿದೆ. ಈ ವರ್ಷದ ಮಾರ್ಚ್ ವೇಳೆ ಮಾತುಕತೆ ಬಹುತೇಕ ಯಶಸ್ವಿಯಾಗಿರುವ ಸೂಚನೆಯಿತ್ತು. ಆದರೆ ಇರಾನ್ ಮತ್ತು ಅಮೆರಿಕ ಕೆಲವು ವಿಷಯಗಳಲ್ಲಿ ಪಟ್ಟು ಹಿಡಿದ ಕಾರಣ ಮಾತುಕತೆ ಅಪೂರ್ಣವಾಗಿದೆ. ಇರಾನ್‍ನ ಮೂರು ಸ್ಥಾವರಗಳಲ್ಲಿ ಯುರೇನಿಯಂ ದಾಸ್ತಾನಿನ ಕುರುಹು ಪತ್ತೆಯಾಗಿರುವ ವಿಷಯದಲ್ಲಿ ವಿಶ್ವಸಂಸ್ಥೆಯ ಪರಮಾಣು ಇಂಧನ ಸಂಸ್ಥೆ ತನ್ನ ತನಿಖೆಯನ್ನು ಅಂತ್ಯಗೊಳಿಸಬೇಕು ಎಂದು ಇರಾನ್ ಷರತ್ತು ಮುಂದಿರಿಸಿದೆ. ಆದರೆ ಇರಾನ್‍ನ ಷರತ್ತುಗಳನ್ನು ಒಪ್ಪಲಾಗದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News