ಸ್ಟಾರ್‍ಲಿಂಕ್ ಇಂಟರ್‍ ನೆಟ್ ಸೇವೆ ಈಗ ಸಕ್ರಿಯ: ಎಲಾನ್ ಮಸ್ಕ್

Update: 2022-09-19 17:35 GMT
photo : NDTV

ನ್ಯೂಯಾರ್ಕ್, ಸೆ.19: ಉಪಗ್ರಹ ಇಂಟರ್‍ನೆಟ್ ಸೇವೆ ಸ್ಟಾರ್‍ಲಿಂಕ್ ಈಗ ಅಂಟಾಕ್ರ್ಟಿಕ ಸೇರಿದಂತೆ ಎಲ್ಲಾ 7 ಖಂಡಗಳಲ್ಲೂ ಲಭ್ಯವಿದೆ ಎಂದು ಎಲಾನ್ ಮಸ್ಕ್ ಘೋಷಿಸಿದ್ದಾರೆ.

ಸ್ಟಾರ್‍ಲಿಂಕ್ ನೆಟ್‍ವರ್ಕ್ ಅನ್ನು ಪ್ರಾಥಮಿಕವಾಗಿ ನೆಲ ಆಧಾರಿತ ದೂರಸಂಪರ್ಕ ಮೂಲಸೌಕರ್ಯ ಲಭ್ಯವಿರದ ಗ್ರಾಮೀಣ ಪ್ರದೇಶದ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂಟಾಕ್ರ್ಟಿಕ ಸಹಿತ  ವಿಶ್ವದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಮಸ್ಕ್ ಅವರ ಸ್ಪೇಸ್‍ಎಕ್ಸ್ ಸಂಸ್ಥೆ ಟರ್ಮಿನಲ್‍ಗಳನ್ನು ಸ್ಥಾಪಿಸಿದೆ ಎಂದು ಮೂಲಗಳು ಹೇಳಿವೆ.

ಸ್ಟಾರ್‍ಲಿಂಕ್ ಇಂಟರ್‍ನೆಟ್ ಸೇವೆ ಈಗ ವಿಶ್ವದ ಎಲ್ಲಾ 7 ಖಂಡಗಳಲ್ಲೂ ಲಭ್ಯವಿದೆ. ಇದನ್ನು ಶಾಂತಿಯುತ ಬಳಕೆಗಾಗಿ ಮಾತ್ರ ಬಳಸಲಾಗುವುದು ಎಂದು ಮಸ್ಕ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಸ್ಟಾರ್‍ಲಿಂಕ್ ಇಂಟರ್‍ನೆಟ್ ಬಾಹ್ಯಾಕಾಶದ ನಿರ್ವಾತದ ಮೂಲಕ ಮಾಹಿತಿ ರವಾನಿಸುವ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತದೆ. ಇದು ಫೈಬರ್ ಆಪ್ಟಿಕ್ ಕೇಬಲ್‍ಗಳಿಗಿಂತ ವೇಗವಾಗಿ ಚಲಿಸುತ್ತದೆ ಮತ್ತು ಹೆಚ್ಚು ಜನ ಮತ್ತು ಪ್ರದೇಶಗಳನ್ನು ತಲುಪಬಹುದಾಗಿದೆ. ಹೆಚ್ಚಿನ ಸ್ಥಳಗಳಲ್ಲಿ ಅಧಿಕ ವೇಗ ಮತ್ತು 20 ಎಂಎಸ್‍ನಷ್ಟು ಕಡಿಮೆ ಸುಪ್ತತೆಯೊಂದಿಗೆ ಸ್ಟಾರ್‍ಲಿಂಕ್ ವೀಡಿಯೊ ಕರೆ, ಆನ್‍ಲೈನ್ ಗೇಮಿಂಗ್, ಸ್ಟ್ರೀಮಿಂಗ್ ಹಾಗೂ ಇತರ ಅಧಿಕ  ಡೇಟಾ ದರದ ಚಟುವಟಿಕೆಯನ್ನು ಸಾಧ್ಯವಾಗಿಸುತ್ತದೆ ಎಂದು ಸ್ಪೇಸ್‍ಎಕ್ಸ್ ವೆಬ್‍ಸೈಟ್‍ನ ಹೇಳಿಕೆ ತಿಳಿಸಿದೆ.

 ಸ್ಪೇಸ್‍ಎಕ್ಸ್ ಈಗಾಗಲೇ 3,200 ಸ್ಟಾರ್‍ಲಿಂಕ್ ಉಪಗ್ರಹಗಳನ್ನು ಭೂಮಿಯ ಕೆಳಕಕ್ಷೆಗೆ ರವಾನಿಸಿದೆ. ಮಸ್ಕ್ ಅವರ ಸಂಸ್ಥೆಗೆ 12,000 ಸ್ಟಾರ್‍ಲಿಂಕ್ ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಅನುಮತಿ ಇರುವುದರಿಂದ ಈ ಸಂಖ್ಯೆ ಹೆಚ್ಚಬಹುದು ಎಂದು ಸ್ಪೇಸ್ ಡಾಟ್ ಕಾಮ್ ಹೇಳಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News