ಮುಂಬೈ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಕೂಟಕ್ಕೆ ಜಯ

Update: 2022-09-20 02:55 GMT

ಮುಂಬೈ: ರಾಜ್ಯದಲ್ಲಿ ಗ್ರಾಮಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 259 ಮಂದಿ ಮತ್ತು ಶಿವಸೇನೆಯ ಏಕನಾಥ ಶಿಂಧೆ ಬಣದಿಂದ ಬೆಂಬಲಿತರಾದ 40 ಮಂದಿ ಸರಪಂಚರಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಂಕುಲೆ ಹೇಳಿದ್ದಾರೆ.

ರವಿವಾರ ರಾಜ್ಯದ 16 ಜಿಲ್ಲೆಗಳ 547 ಗ್ರಾಮಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು, ಶೇಕಡ 76ರಷ್ಟು ಮತದಾನವಾಗಿತ್ತು. ಚುನಾವಣೆ ಪಕ್ಷ ರಹಿತವಾಗಿ ನಡೆಯುತ್ತದೆ. ಮತಗಳ ಎಣಿಕೆ ಸೋಮವಾರ ನಡೆದಿದ್ದು, ಗ್ರಾಮಪಂಚಾಯ್ತಿ ಚುನಾವಣೆ ಸಂದರ್ಭದಲ್ಲೇ ಸರಪಂಚ ಹುದ್ದೆಗೆ ಕೂಡಾ ನೇರ ಮತದಾನ ನಡೆದಿದೆ.

ಚುನಾವಣೆಯಲ್ಲಿ 259 ಮಂದಿ ಬಿಜೆಪಿ ಬೆಂಬಲಿತರು ಸರಪಂಚರಾಗಿ ಆಯ್ಕೆಯಾಗಿದ್ದಾರೆ ಎಂದು ಚಂದ್ರಶೇಖರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣದಿಂದ ಬೆಂಬಲಿತರಾದ 40 ಮಂದಿ ಆಯ್ಕೆಯಾಗಿದ್ದರೆ ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ ಪಂಚಾಯ್ತಿಗಳಿಗೆ ಆಯ್ಕೆಯಾದವರಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ಮಂದಿ ಶಿಂಧೆ ಬಣ- ಬಿಜೆಪಿ ಮೈತ್ರಿಕೂಟದ ಬೆಂಬಲಿಗರು ಎಂದು ಅವರು ಹೇಳಿದರು. ಇದು ಶಿಂಧೆ- ಫಡ್ನವೀಸ್ ಸರ್ಕಾರದ ಮೇಲಿನ ವಿಶ್ವಾಸವನ್ನು ದೃಢಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News