×
Ad

ಕೇಂದ್ರ ಸಚಿವ ನಾರಾಯಣ ರಾಣೆ ಬಂಗಲೆಯಲ್ಲಿನ ಅಕ್ರಮ ನಿರ್ಮಾಣದ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ಆದೇಶ

Update: 2022-09-20 13:45 IST
Photo:PTI

ಮುಂಬೈ,ಸೆ.20: ಇಲ್ಲಿಯ ಜುಹು ಪ್ರದೇಶದಲ್ಲಿರುವ ಕೇಂದ್ರ ಸಚಿವ ನಾರಾಯಣ ರಾಣೆಯವರ ಬಂಗಲೆಯಲ್ಲಿನ ಅನಧಿಕೃತ ನಿರ್ಮಾಣವನ್ನು ನೆಲಸಮಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಆದೇಶಿಸಿದೆ. ಕಟ್ಟಡವು ಫ್ಲೋರ್ ಸ್ಪೇಸ್ ಇಂಡೆಕ್ಸ್ (ಮಹಡಿ ಜಾಗ ಸೂಚಿ) ಮತ್ತು ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅದು ಬೆಟ್ಟು ಮಾಡಿದೆ.
ಅಕ್ರಮ ನಿರ್ಮಾಣದ ಸಕ್ರಮವನ್ನು ಕೋರಿ ರಾಣೆ ಕುಟುಂಬವು ನಡೆಸುತ್ತಿರುವ ಕಂಪನಿಯು ಸಲ್ಲಿಸಿರುವ ದ್ವಿತೀಯ ಅರ್ಜಿಯನ್ನು ಪುರಸ್ಕರಿಸಲು ಬಿಎಂಸಿಗೆ ಅನುಮತಿಯಿಲ್ಲ,ಹಾಗೆ ಮಾಡಿದರೆ ಅದು ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ಸಾರಾಸಗಟಾಗಿ ಉತ್ತೇಜಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಎರಡು ವಾರಗಳಲ್ಲಿ ಬಂಗಲೆಯ ಅನಧಿಕೃತ ಭಾಗಗಳನ್ನು ನೆಲಸಮಗೊಳಿಸುವಂತೆ ಮತ್ತು ನಂತರದ ಒಂದು ವಾರದೊಳಗೆ ಕ್ರಮಾನುಷ್ಠಾನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠವು ಬಿಎಂಸಿಗೆ ನಿರ್ದೇಶನ ನೀಡಿದೆ.
ರಾಣೆಯವರಿಗೆ 10 ಲ.ರೂ.ಗಳ ದಂಡವನ್ನೂ ವಿಧಿಸಿದ ನ್ಯಾಯಾಲಯವು,ಅದನ್ನು ಎರಡು ವಾರಗಳಲ್ಲಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಜಮೆ ಮಾಡುವಂತೆ ನಿರ್ದೇಶನ ನೀಡಿದೆ.
ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಲು ತನ್ನ ಆದೇಶವನ್ನು ಆರು ವಾರಗಳ ಕಾಲ ತಡೆಹಿಡಿಯುವಂತೆ ರಾಣೆ ಪರ ವಕೀಲ ಶಾರ್ದೂಲ ಸಿಂಗ್ ಅವರ ಮನವಿಯನ್ನು ಪೀಠವು ತಿರಸ್ಕರಿಸಿತು.
ಪಾಲಿಕೆಯು ಈ ಹಿಂದೆ ಹೊರಡಿಸಿದ್ದ ಆದೇಶಗಳಿಂದ ಪ್ರಭಾವಿತಗೊಳ್ಳದೆ ತಾನು ಸಲ್ಲಿಸಿರುವ ದ್ವಿತೀಯ ಅರ್ಜಿಯನ್ನು ನಿರ್ಧರಿಸುವಂತೆ ಬಿಎಂಸಿಗೆ ನಿರ್ದೇಶನಗಳನ್ನು ಕೋರಿ ರಾಣೆ ಕುಟುಂಬದ ಒಡೆತನದ ಕಾಲ್ಕಾ ರಿಯಲ್ ಎಸ್ಟೇಟ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತು.
ಬಿಎಂಸಿ ಈ ವರ್ಷದ ಜೂನ್‌ನಲ್ಲಿ ಸಕ್ರಮ ಕೋರಿಕೆ ಅರ್ಜಿಯನ್ನು ನಿರ್ಮಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣವನ್ನು ನೀಡಿ ತಿರಸ್ಕರಿಸಿತ್ತು. ಕಂಪನಿಯು ಜುಲೈನಲ್ಲಿ ದ್ವಿತೀಯ ಅರ್ಜಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News