ಎಚ್‍ಐವಿ, ಏಡ್ಸ್ ರೋಗಗಳ ಔಷಧಿಗಳ ಕೊರತೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಎಚ್‍ಐವಿ/ಏಡ್ಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಎಆರ್‍ಟಿ ಅಥವಾ ಆ್ಯಂಟಿ ರೆಟ್ರೋವೈರಲ್ ಔಷಧಿಗಳ ಕೊರತೆಯ ಕುರಿತಂತೆ ದೂರಿ ನೆಟ್‍ವರ್ಕ್ ಆಫ್ ಪೀಪಲ್ ಲಿವಿಂಗ್ ವಿದ್ ಏಡ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ (Supreme Court of India) ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಔಷಧಿಗಳಿಗಾಗಿ ಆಗಸ್ಟ್ 2021 ರಲ್ಲಿ ಕರೆಯಬೇಕಿದ್ದ ಟೆಂಡರ್ ಅನ್ನು ಅದೇ ವರ್ಷದ ಡಿಸೆಂಬರ್‍ನಲ್ಲಿ ಕರೆಯಲಾಗಿತ್ತಾದರೂ ಫಲ ನೀಡದೇ ಇದ್ದುದರಿಂದ ಮತ್ತೆ ಮಾರ್ಚ್ 2022 ರಲ್ಲಿ ಟೆಂಡರ್ ಕರೆಯಬೇಕಾಯಿತು ಎಂದು ಅರ್ಜಿಯಲ್ಲಿ ವಿವರಿಸಿದ್ದನ್ನು ಪರಿಗಣಿಸಿದ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ ಎರಡು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್‌ರಿಂದ ಬಿಲ್ಲವ ಸಮುದಾಯಕ್ಕೆ ವಂಚನೆ: ಪ್ರಣವಾನಂದ ಸ್ವಾಮೀಜಿ ಆರೋಪ
ಈ ಔಷಧಿಯ ಕೊರತೆಯಿಂದಾಗಿ ಏಡ್ಸ್/ಎಚ್‍ಐವಿ ಸೋಂಕಿತರ ಆರೋಗ್ಯ ಸಮಸ್ಯೆ ಉಲ್ಬಣಿಸಬಹುದು ಹಾಗೂ ಈ ಔಷಧಿಯ ಸ್ಟಾಕುಗಳನ್ನು ತರಿಸುವಲ್ಲಿ ವಿಳಂಬದಲ್ಲಿ ವ್ಯವಸ್ಥೆಯ ದೋಷವಿದೆ ಎಂದು ಅರ್ಜಿ ಸಲ್ಲಿಸಿದ ವಕೀಲೆ ಆಸ್ಥಾ ಶರ್ಮ ವಿವರಿಸಿದ್ದಾರೆ.
ಜನವರಿ 2022 ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗುಜರಾತ್, ರಾಜಸ್ಥಾನ, ಬಿಹಾರ ಸಹಿತ ಹಲವು ರಾಜ್ಯಗಳ ಎಆರ್‍ಟಿ ಕೇಂದ್ರಗಳಲ್ಲಿ ಔಷಧಿ ಲಭ್ಯವಿಲ್ಲ ಹಾಗೂ ಜುಲೈ ತಿಂಗಳಿನಲ್ಲಿ ದಿಲ್ಲಿಯ ಎಆರ್‍ಟಿ ಕೇಂದ್ರಗಳಲ್ಲಿ ಔಷಧಿ ಲಭ್ಯವಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.